ಮನ್ವಂತ್​ ಕುಮಾರ್​ ಬ್ಯಾಟಿಂಗ್​ ಏಜೆನ್ಸಿ
ಕ್ರೀಡೆ

Ranji Trophy: ಮನ್ವಂತ್​ ಕುಮಾರ್​ ಚೊಚ್ಚಲ ಶತಕದಾಟ, ಕರ್ನಾಟಕ ಮೇಲುಗೈ

ಸೌರಾಷ್ಟ್ರಕ್ಕೆ ವೇಗಿಗಳಿಂದ ಕಡಿವಾಣ; ಅಭಿಲಾಷ್​ ಶೆಟ್ಟಿ ಆಲ್ರೌಂಡ್​ ನಿರ್ವಹಣೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆಲ್ರೌಂಡರ್​ ಎಲ್​. ಮನ್ವಂತ್​ ಕುಮಾರ್​ (135 ರನ್​, 214 ಎಸೆತ, 11 ಬೌಂಡರಿ, 6 ಸಿಕ್ಸರ್​) ಚೊಚ್ಚಲ ಶತಕದ ಸಾಹಸ ಮತ್ತು ವೇಗಿಗಳ ಬಿಗಿ ಬೌಲಿಂಗ್​ ದಾಳಿಯ ಬಲದಿಂದ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ 2ನೇ ಲೀಗ್​ ಪಂದ್ಯದಲ್ಲಿ ಪ್ರವಾಸಿ ಸೌರಾಷ್ಟ್ರ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಗ್ರೌಂಡ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 8 ವಿಕೆಟ್​ಗೆ 281 ರನ್​ಗಳಿಂದ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕ ತಂಡ, ಮತ್ತೆ 61 ರನ್​ ಸೇರಿಸಿ 111.3 ಓವರ್​ಗಳಲ್ಲಿ 342 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಸೌರಾಷ್ಟ್ರ ತಂಡ ಉತ್ತಮ ಆರಂಭ ಕಂಡರೂ, ಬಳಿಕ ಕುಸಿತ ಅನುಭವಿಸಿ ದಿನದಂತ್ಯಕ್ಕೆ 53 ಓವರ್​ಗಳಲ್ಲಿ 4 ವಿಕೆಟ್​ಗೆ 164 ರನ್​ ಗಳಿಸಿ ಸಂಕಷ್ಟದಲ್ಲಿದೆ. ಕರ್ನಾಟಕ ತಂಡ ಇನ್ನೂ 178 ರನ್​ ಮುನ್ನಡೆಯಲ್ಲಿದೆ. ಅರ್ಪಿತ್​ ವಸವಾಡ (25*) ಮತ್ತು ಪ್ರೇರಕ್​ ಮಂಕಡ್​ (13*) ಮುರಿಯದ 5ನೇ ವಿಕೆಟ್​ಗೆ 82 ಎಸೆತಗಳಲ್ಲಿ 36 ರನ್​ ಸೇರಿಸಿ 3ನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಆರಂಭಿಕರಾದ ಹೆತ್ವಿಕ್​ ಕೋಟಕ್​ (46) ಮತ್ತು ಹಾರ್ವಿಕ್​ ದೇಸಾಯಿ (77) ಮೊದಲ ವಿಕೆಟ್​ಗೆ 175 ಎಸೆತಗಳಲ್ಲಿ 110 ರನ್​ ಸೇರಿಸಿ ಕರ್ನಾಟಕಕ್ಕೆ ಸವಾಲೊಡ್ಡಿದರು. ಇನಿಂಗ್ಸ್​ನ 30ನೇ ಓವರ್​ನಲ್ಲಿ ಕೊನೆಗೂ ವೇಗಿ ವಿದ್ವತ್​ ಕಾವೇರಪ್ಪ ಈ ಜತೆಯಾಟವನ್ನು ಬೇರ್ಪಡಿಸಿದರು. ಇದರ ಬೆನ್ನಲ್ಲೇ ಕರ್ನಾಟಕ ತಂಡ 18 ರನ್​ ಅಂತರದಲ್ಲಿ 4 ವಿಕೆಟ್​ ಕಬಳಿಸಿ ಮೇಲುಗೈ ಸಾಧಿಸಿತು. ಕರ್ನಾಟಕ ಇನಿಂಗ್ಸ್​ಗೆ ಮರುಜೀವ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗಿ ಅಭಿಲಾಷ್​ ಶೆಟ್ಟಿ (26ಕ್ಕೆ 2) ಬಳಿಕ ಬೌಲಿಂಗ್​ನಲ್ಲಿ ಮಿಂಚಿ, ಸತತ 2 ಓವರ್​ಗಳಲ್ಲಿ ಚಿರಾಗ್​ ಜಾನಿ (1) ಮತ್ತು ಜಯ್​ ಗೋಯಿಲ್​ (0) ವಿಕೆಟ್​ ಕಬಳಿಸುವ ಮೂಲಕ ಸೌರಾಷ್ಟ್ರಕ್ಕೆ ಶಾಕ್​ ನೀಡಿದರು. ಬಳಿಕ ಅರ್ಪಿತ್​&ಪ್ರೇರಕ್​ ಜೋಡಿ ಸೌರಾಷ್ಟ್ರಕ್ಕೆ ಆಸರೆಯಾಗಿ ನಿಂತಿತು.

ಮನ್ವಂತ್​ ಚೊಚ್ಚಲ ಶತಕಕ್ಕೆ ಅಭಿಲಾಷ್​ ಸಮರ್ಥ ಸಾಥ್​

ಮನ್ವಂತ್​ ಕುಮಾರ್​ ಮತ್ತು ಅಭಿಲಾಷ್​ ಶೆಟ್ಟಿ (14 ರನ್​, 137 ಎಸೆತ, 1 ಬೌಂಡರಿ) ಜೋಡಿ 9ನೇ ವಿಕೆಟ್​ಗೆ 346 ಎಸೆತಗಳಲ್ಲಿ 146 ರನ್​ ಜತೆಯಾಟವಾಡುವ ಮೂಲಕ ಕರ್ನಾಟಕ ತಂಡದ ಇನಿಂಗ್ಸ್​ನ ಚಿತ್ರಣವನ್ನೇ ಬದಲಾಯಿಸಿತು. ಈ ಮೂಲಕ ಕರ್ನಾಟಕ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾಯಿತು. ಮೈಸೂರಿನ 22 ವರ್ಷದ ಮನ್ವಂತ್​ ಕುಮಾರ್​ 9ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದಾಗ ಕರ್ನಾಟಕ ತಂಡ 187 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಬಳಿಕ ಸುಮಾರ 59 ಓವರ್​ಗಳ ಕಾಲ ಕ್ರೀಸ್​ನಲ್ಲಿ ಭದ್ರವಾಗಿ ನಿಂತ ಅವರು ರಾಜ್ಯದ ಇನಿಂಗ್ಸ್​ಗೆ ಮರುಜೀವ ತುಂಬುವಲ್ಲಿ ಯಶಸ್ವಿಯಾದರು. ಅವರಿಗೆ ಬಾಲಂಗೋಚಿ ಅಭಿಲಾಷ್​ ಶೆಟ್ಟಿ ಉತ್ತಮ ಬೆಂಬಲವನ್ನೇ ಒದಗಿಸಿದರು. 86 ರನ್​ಗಳಿಂದ ದಿನದಾಟ ಆರಂಭಿಸಿದ ಮನ್ವಂತ್​ 94 ರನ್​ ಗಳಿಸಿದಾಗ ಜೀವದಾನ ಪಡೆದರು. ಇದರ ಲಾಭವೆತ್ತಿದ ಅವರು, ತನ್ನ 2ನೇ ರಣಜಿ ಪಂದ್ಯದಲ್ಲೇ ಚೊಚ್ಚಲ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಅವರು ಎಡಗೈ ಸ್ಪಿನ್ನರ್​ ಪಾರ್ಥ್​ ಭಟ್​ಗೆ ವಿಕೆಟ್​ ಒಪ್ಪಿಸಿ ನಿರ್ಗಮಿಸಿದರು. ಮರು ಓವರ್​ನಲ್ಲಿ ವಿದ್ವತ್​ ಕಾವೇರಪ್ಪ (1) ಅವರನ್ನೂ ಔಟ್​ ಮಾಡಿದ ಪಾರ್ಥ್​ ಭಟ್​ 5 ವಿಕೆಟ್​ ಗೊಂಚಲು ಸಾಧಿಸಿದರು.

ಕರ್ನಾಟಕ: 111.3 ಓವರ್​ಗಳಲ್ಲಿ 342 (ಮನ್ವಂತ್​ ಕುಮಾರ್​ 135, ಅಭಿಲಾಷ್​ ಶೆಟ್ಟಿ 14*, ವಿದ್ವತ್​ 1, ಪಾರ್ಥ್​ ಭಟ್​ 89ಕ್ಕೆ 5, ಉನಾದ್ಕತ್​ 61ಕ್ಕೆ 3), ಸೌರಾಷ್ಟ್ರ: 53 ಓವರ್​ಗಳಲ್ಲಿ 4 ವಿಕೆಟ್​ಗೆ 164 (ಹೆತ್ವಿಕ್​ ಕೊಟಕ್​ 46, ಹಾರ್ವಿಕ್​ ದೇಸಾಯಿ 77, ಚಿರಾಗ್​ ಜಾನಿ 1, ಜಯ್​ ಗೋಹಿಲ್​ 0, ಅರ್ಪಿತ್​ ವಸವಾಡ 25*, ಪ್ರೇರಕ್​ ಮಂಕಡ್​ 13*, ಅಭಿಲಾಷ್​ ಶೆಟ್ಟಿ 26ಕ್ಕೆ 2, ವೈಶಾಖ್​ 47ಕ್ಕೆ 1, ವಿದ್ವತ್​ ಕಾವೇರಪ್ಪ 31ಕ್ಕೆ 1).

ಕನ್ನಡಿಗ ಸಮರ್ಥ್​, ಸರ್ಫ್ರಾಜ್​​ ಶತಕ; ಬಡೋನಿ ದ್ವಿಶತಕದಾಟ

ಕರ್ನಾಟಕದ ಬ್ಯಾಟರ್​ ಆರ್​. ಸಮರ್ಥ್​ (143 ರನ್​, 202 ಎಸೆತ, 17 ಬೌಂಡರಿ, 1 ಸಿಕ್ಸರ್​) ವಿದರ್ಭ ಪರ ಹಾಲಿ ರಣಜಿ ಚಾಂಪಿಯನ್​ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಇನಿಂಗ್ಸ್​ ಮುನ್ನಡೆ ಸಾಧಿಸಲು ನೆರವಾದರು. ಜಮ್ಮು-ಕಾಶ್ಮೀರದ 260 ರನ್​ಗಳಿಗೆ ಪ್ರತಿಯಾಗಿ ವಿದರ್ಭ 305 ರನ್​ ಕಲೆಹಾಕಿತು. ಸಮರ್ಥ್​ ಪ್ರಥಮ ದಜೆ ಕ್ರಿಕೆಟ್​ನಲ್ಲಿ ಬಾರಿಸಿದ 16ನೇ ಶತಕ ಇದಾಗಿದೆ. ಮತ್ತೊಂದೆಡೆ 42 ಬಾರಿಯ ಚಾಂಪಿಯನ್​ ಸರ್ಫ್ರಾಜ್​ ಖಾನ್​ (139* ರನ್​, 213 ಎಸೆತ, 18 ಬೌಂಡರಿ) ಶತಕ ಬಾರಿಸಿ, ಹಿಮಾಚಲ ಪ್ರದೇಶ ವಿರುದ್ಧ ಇನಿಂಗ್ಸ್​ ಮುನ್ನಡೆ ಸಾಧಿಸಲು ನೆರವಾದರು. ಹಿ.ಪ್ರದೇಶದ 140 ರನ್​ಗಳಿಗೆ ಪ್ರತಿಯಾಗಿ ಮುಂಬೈ 4 ವಿಕೆಟ್​ಗೆ 398 ರನ್​ ಗಳಿಸಿ ಮೇಲುಗೈ ಸಾಧಿಸಿದೆ. ದೆಹಲಿ ಪರ ಎಡಗೈ ಬ್ಯಾಟರ್​ ಆಯುಷ್​ ಬಡೋನಿ (217 ರನ್​, 246 ಎಸೆತ, 22 ಬೌಂಡರಿ, 2 ಸಿಕ್ಸರ್​) ದ್ವಿಶತಕ ಸಿಡಿಸಿ ಬೃಹತ್​ ಮೊತ್ತ ಗಳಿಸಲು ನೆರವಾದರು. ದೆಹಲಿ 6 ವಿಕೆಟ್​ಗೆ 648 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಚಂಡೀಗಢ ಎದುರು ಹರಿಯಾಣ ತಂಡ ಎರಡೇ ದಿನಗಳಲ್ಲಿ ಇನಿಂಗ್ಸ್​ ಮತ್ತು 24 ರನ್​ಗಳಿಂದ ಜಯಿಸಿತು.