ಕ್ರೀಡೆ

ಮನು ಭಾಕರ್​ ಬ್ರ್ಯಾಂಡ್​ ಮೌಲ್ಯ ಭಾರಿ ಏರಿಕೆ; ಒಲಿಂಪಿಕ್ಸ್​ ಅವಳಿ ಕಂಚಿನ ಪದಕ ಬೇಟೆಯ ನಂತರ ಮನೆ ಮುಂದೆ ಜಾಹೀರಾತುದಾರರ ಕ್ಯೂ!

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅವಳಿ ಕಂಚಿನ ಪದಕ ಜಯಿಸುವ ಮೂಲಕ ಹರಿಯಾಣದ ಯುವ ಶೂಟರ್​ ಮನು ಭಾಕರ್​ ಕ್ರೀಡಾಪ್ರೇಮಿಗಳ ಮನಗೆದ್ದು, ಭಾರತದೆಲ್ಲೆಡೆ ಮನೆಮಾತಾಗಿದ್ದಾರೆ. ಇದರ ಬೆನ್ನಲ್ಲೇ ಅವರು ಜಾಹೀರಾತುದಾರರ ಗಮನವನ್ನೂ ಸೆಳೆದಿದ್ದಾರೆ. ಇದರಿಂದ ಅವರ ಬ್ರ್ಯಾಂಡ್​ ಮೌಲ್ಯವೂ ಭಾರಿ ಏರಿಕೆ ಕಂಡಿದೆ.

ಒಂದೇ ಒಲಿಂಪಿಕ್ಸ್​ನಲ್ಲಿ ಅವಳಿ ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟುಗಳು ಎನಿಸಿರುವ 23 ವರ್ಷದ ಮನು ಬ್ರ್ಯಾಂಡ್​ ಮೌಲ್ಯ ಈಗ 1.5 ಕೋಟಿ ರೂ. ಆಗಿದೆ. ಇನ್ನು ಪ್ರತಿ ಡಿಜಿಟಲ್​ ಜಾಹೀರಾತಿಗೂ ಅವರು 30 ಲಕ್ಷ ರೂ. ಸಂಭಾವನೆ ಪಡೆಯುವ ನಿರೀಕ್ಷೆ ಇದೆ.

"ಈಗಾಗಲೆ ಹಲವು ಜಾಹೀರಾತುದಾರರು ನಮ್ಮನ್ನು ಸಂಪರ್ಕಿಸಿದ್ದಾರೆ. 2ನೇ ಪದಕ ಗೆಲುವಿನ ಬಳಿಕ ಇದು ಇನ್ನಷ್ಟು ಹೆಚ್ಚಾಗಿದೆ. ಸುಮಾರು 40 ಕಂಪನಿಗಳು ಕರೆ ಮಾಡಿ ಚರ್ಚಿಸಿವೆ' ಎಂದು ಐಒಎಸ್​ ಸ್ಪೋರ್ಟ್ಸ್​ ಆಂಡ್​ ಎಂಟರ್​ಟೈನ್​ಮೆಂಟ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೀರವ್​ ತೋಮರ್​ ತಿಳಿಸಿದ್ದಾರೆ. ಈ ಸಂಸ್ಥೆಯೇ ಸದ್ಯ ಮನು ಅವರ ಬ್ರಾ$್ಯಂಡ್​ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ.

ಪ್ರಮುಖವಾಗಿ ತಂಪುಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷನ್​, ಡೈರಿ, ಆರ್ಗಾನಿಕ್​ ಕಂಪನಿಗಳು ಮನು ಅವರನ್ನು ಜಾಹೀರಾತಿಗಾಗಿ ಸಂಪರ್ಕಿಸಿವೆ. ಹಲವು ಟಿವಿ ಶೋಗಳಿಗೂ ಅತಿಥಿಯಾಗಿ ಆಗಮಿಸಲು ಕರೆ ಬಂದಿವೆ ಎಂದವರು ತಿಳಿಸಿದ್ದಾರೆ. ಒಲಿಂಪಿಕ್ಸ್​ಗೆ ಮುನ್ನ ಮನು ಕೇವಲ ಒಂದು ಕಂಪನಿಯೊಂದಿಗೆ ಜಾಹೀರಾತು ಒಪ್ಪಂದ ಹೊಂದಿದ್ದರು.

ಸ್ಟಾರ್​ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3ರಿಂದ 6 ಕೋಟಿ ರೂ. ತೆಗೆದುಕೊಳ್ಳುತ್ತಾರೆ. ಉದಯೋನ್ಮುಖ ಕ್ರಿಕೆಟಿಗರು 2&3 ಕೋಟಿ ತೆಗೆದುಕೊಳ್ಳುತ್ತಾರೆ. ಇತರ ಕ್ರೀಡಾಪಟುಗಳು 1ರಿಂದ 2 ಕೋಟಿ ರೂ. ಬ್ರ್ಯಾಂಡ್​ ಮೌಲ್ಯ ಹೊಂದಿದ್ದಾರೆ ಎಂಬುದು ಮಾರುಕಟ್ಟೆ ವಿಶ್ಲೇಷಣೆಯಾಗಿದೆ. ಪಿವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ.

ಹಿಂಬಾಲಕರ ಸಂಖ್ಯೆ ಏರಿಕೆ

ಮನು ಅವಳಿ ಪದಕ ಬೇಟೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಹಿಂಬಾಲಿಸುವ ಕ್ರೀಡಾಪ್ರೇಮಿಗಳ ಸಂಖ್ಯೆಯೂ ಭಾರಿ ಏರಿಕೆ ಕಂಡಿದೆ. ಪ್ಯಾರಿಸ್​ ಒಲಿಂಪಿಕ್ಸ್​ಗೆ ಮುನ್ನ ಇನ್​ಸ್ಟಾಗ್ರಾಂನಲ್ಲಿ ಅವರಿಗೆ 1.70 ಲಕ್ಷ ಹಿಂಬಾಲಕರಿದ್ದರು. ಈಗ 15 ಲಕ್ಷ ದಾಟಿದೆ. ಎಕ್ಸ್​ನಲ್ಲೂ ಹಿಂಬಾಲಕರ ಸಂಖ್ಯೆ 2.93 ಲಕ್ಷ ದಾಟಿದೆ. ಇದು ಕೂಡ ಮನುಗೆ ಜಾಹೀರಾತುದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ನೆರವಾಗಲಿದೆ. ಇನ್ನು ಜಾಲತಾಣದ ಪ್ರಾಯೋಜಿತ ಪೋಸ್ಟ್​ಗಳಿಗೂ 8ರಿಂದ 30 ಲಕ್ಷ ರೂ. ಚಾರ್ಜ್​ ಮಾಡಬಹುದು ಎನ್ನಲಾಗಿದೆ.

*ನಾನು ಭಾರತದ ಪರ ಇನ್ನಷ್ಟು ಒಲಿಂಪಿಕ್ಸ್​ ಪದಕಗಳನ್ನು ಗೆಲ್ಲಲು ಬಯಸಿದ್ದೇನೆ. ಪ್ಯಾರಿಸ್​ ಸಮಾರೋಪದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಲಭಿಸಿದ್ದು ನನ್ನ ಭಾಗ್ಯ. ಇದನ್ನು ನಾನು ಜೀವನಪೂರ್ತಿ ಆನಂದಿಸುವೆ.

| ಮನು ಭಾಕರ್​