ಇಂಡಿಯನ್ ಓಪನ್ನಲ್ಲಿ ಮಂಡ್ಯದ ವಿಜಯಕುಮಾರಿಗೆ ಬೆಳ್ಳಿ ಪದಕ
ಬೆಂಗಳೂರು: ಮಂಡ್ಯದ ಅನುಭವಿ ಅಥ್ಲೀಟ್ ವಿಜಯಕುಮಾರಿ ಜಿ.ಕೆ. (G.K. Vijayakumari) ಕೇರಳದ ತಿರುವನಂತಪುರದಲ್ಲಿ ಶನಿವಾರ ನಡೆದ 7ನೇ ಇಂಡಿಯನ್ ಓಪನ್ (Indian Open) 400 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡು ಗಮನಸೆಳೆದಿದ್ದಾರೆ. ಛಲವೊಂದಿದ್ದರೆ ಎಂಥಾ ಕಷ್ಟಗಳನ್ನೂ ಮೆಟ್ಟಿ ನಿಲ್ಲಬಹುದು ಎಂದು ಅವರು ಈ ಮೂಲಕ ಸಾಧಿಸಿ ತೋರಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಗೌಡೇನಹಳ್ಳಿ ಮೂಲದ ವಿಜಯಕುಮಾರಿ ಆರ್ಥಿಕ ಮುಗ್ಗಟ್ಟು ಮತ್ತು ಗಾಯದ ಸಮಸ್ಯೆಯಿಂದಾಗಿ ಕೆಲ ಸಮಯದ ಹಿಂದೆ ಕ್ರೀಡಾಲೋಕದಿಂದಲೇ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಿದ್ದರು. ಈ ಪೈಕಿ ಮೊದಲ ಕಂತಿನ 5 ಲಕ್ಷ ರೂ.ಗಳನ್ನು ಬಿಬಿಎಂಪಿ ಮೂಲಕ ಈಗಾಗಲೆ ಹಸ್ತಾಂತರಿಸಿದ್ದು, ಇದು ಅವರ ತರಬೇತಿ ಮತ್ತು ಚಿಕಿತ್ಸೆಗೆ ಸಂಜೀವಿನಿಯಾಗಿತ್ತು.
ಕೃತಜ್ಞತೆ ಸಲ್ಲಿಸಿದ ವಿಜಯಕುಮಾರಿ: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪದಕ ಗೆದ್ದ ಬಳಿಕ ಮಾತನಾಡಿರುವ ವಿಜಯಕುಮಾರಿ, "ನನ್ನ ಸಂಕಷ್ಟದ ಸಮಯದಲ್ಲಿ ಧೈರ್ಯತುಂಬಿ ಆರ್ಥಿಕ ಸಹಾಯ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನಾನು ಚಿರಋಣಿ. ಅವರ ಬೆಂಬಲವಿಲ್ಲದಿದ್ದರೆ ಈ ಮಟ್ಟದ ಸಾಧನೆ ಸಾಧ್ಯವಾಗುತ್ತಿರಲಿಲ್ಲ' ಎಂದಿದ್ದಾರೆ.
ಈಗಾಗಲೆ ಏಕಲವ್ಯ, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿರುವ ವಿಜಯಕುಮಾರಿ, ಮುಂಬರುವ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ಗಳಲ್ಲಿ ಭಾಗವಹಿಸಿ ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ.
*ವಿಜಯಕುಮಾರಿ ಸಾಧನೆ ಮಂಡ್ಯ ಜಿಲ್ಲೆ ಮತ್ತು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಕಠಿಣ ಶ್ರಮ, ಛಲ ಮತ್ತು ಸರ್ಕಾರದ ಬೆಂಬಲ ಇತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ನೆರವು ನಿಜಕ್ಕೂ ಓರ್ವ ಕ್ರೀಡಾಪಟುವಿನ ಬೆಳವಣಿಗೆಗೆ ಪೂರಕವಾಗಿದೆ. ವಿಜಯಕುಮಾರಿ ಅವರ ಮುಂದಿನ ಕ್ರೀಡಾ ಸಾಧನೆಗೂ ಬೆನ್ನೆಲುಬಾಗಿ ನಿಲ್ಲುವುದಾಗಿ ಡಿಸಿಎಂ ತಿಳಿಸಿದ್ದಾರೆ. ಶ್ರೀವಲ್ಲೇ ಇನ್ನೂ 5 ಲಕ್ಷ ರೂ. ನೀಡುವುದಲ್ಲದೆ, ಅವರನ್ನು ಕರೆಸಿ ಸನ್ಮಾನಿಸುವುದಾಗಿ ಹೇಳಿದ್ದಾರೆ. ವಿಜಯಕುಮಾರಿ ಮುಂದಿನ ಕ್ರೀಡಾಕೂಟಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ.
| ದಿನೇಶ್ ಗೂಳಿಗೌಡ, ಶಾಸಕ ಮತ್ತು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ