ಮುಂಬೈ: ಆರಂಭಿಕರಾದ ಪ್ರತಿಕಾ ರಾವಲ್ (122 ರನ್, 134 ಎಸೆತ, 13 ಬೌಂಡರಿ, 2 ಸಿಕ್ಸರ್) ಮತ್ತು ಉಪನಾಯಕಿ ಸ್ಮೃತಿ ಮಂದನಾ (109 ರನ್, 95 ಎಸೆತ, 10 ಬೌಂಡರಿ, 4 ಸಿಕ್ಸರ್) ಭರ್ಜರಿ ಶತಕದಾಟದ ಬಲದಿಂದ ಆತಿಥೇಯ ಭಾರತ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ತನ್ನ 6ನೇ ಹಾಗೂ ನಿರ್ಣಾಯಕ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದನ್ವಯ 53 ರನ್ಗಳಿಂದ ಜಯಿಸಿದೆ. ಇದರೊಂದಿಗೆ ಸತತ 3 ಸೋಲಿನ ಬಳಿಕ ಗೆಲುವಿನ ಹಳಿ ಏರಿರುವ ಭಾರತ ತಂಡ 4ನೇ ತಂಡವಾಗಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಇನ್ನು ಕೊನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾ (ಅ.26) ವಿರುದ್ಧ ಸೋತರೂ ಭಾರತ ಉಪಾಂತ್ಯಕ್ಕೇರಲಿದೆ. ಐಸಿಸಿ ಈ ಬಾರಿ ಸೆಮೀಸ್ ಲೆಕ್ಕಾಚಾರದಲ್ಲಿ ರನ್ರೇಟ್ಗಿಂತ ಗೆಲುವಿನ ಸಂಖ್ಯೆಗೆ ಆದ್ಯತೆ ನೀಡಿರುವುದು ಇದಕ್ಕೆ ಕಾರಣ.
ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಸ್ಮೃತಿ-ಪ್ರತಿಕಾ ಮೊದಲ ವಿಕೆಟ್ಗೆ 202 ಎಸೆತಗಳಲ್ಲಿ 212 ರನ್ಗಳ ಭದ್ರಬುನಾದಿ ಹಾಕಿಕೊಟ್ಟರು. 48ನೇ ಓವರ್ ಬಳಿಕ ಒಂದು ಗಂಟೆಗೂ ಅಧಿಕ ಕಾಲ ಮಳೆ ಅಡಚಣೆ ಕಾಡಿದ್ದರಿಂದ ಪಂದ್ಯ 49 ಓವರ್ಗಳಿಗೆ ಕಡಿತಗೊಂಡಿತು. ಭಾರತ ಮತ್ತೆ ಒಂದು ಓವರ್ ಆಡಿ 3 ವಿಕೆಟ್ಗೆ 340 ರನ್ ಕಲೆಹಾಕಿತು. ನಂತರ ಮಳೆಯಿಂದಾಗಿ ಕಿವೀಸ್ ಚೇಸಿಂಗ್ ವಿಳಂಬಗೊಂಡಿತು. ಹೀಗಾಗಿ ಕಿವೀಸ್ಗೆ 44 ಓವರ್ಗಳಲ್ಲಿ 325 ರನ್ ಗಳಿಸುವ ಪರಿಷತ ಗುರಿ ನೀಡಲಾಯಿತು. ಭಾರತದ ಸಂಘಟಿತ ದಾಳಿ ಎದುರು ತಿಣುಕಾಡಿದ ಕಿವೀಸ್ 8 ವಿಕೆಟ್ಗೆ 271 ರನ್ ಗಳಿಸಲಷ್ಟೇ ಶಕ್ತಗೊಂಡಿತು.