ರಾಜ್‌ಕೋಟ್: ಕಳೆದ ವರ್ಷಾಂತ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಭಾರತ ಮಹಿಳಾ ತಂಡ ಶುಕ್ರವಾರ ಹಾಲಿ ವರ್ಷದ ಮೊದಲ ಪಂದ್ಯವನ್ನಾಡಲಿದೆ. ಪ್ರವಾಸಿ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಮಹಿಳಾ ಏಕದಿನ ಸರಣಿಗೆ ರಾಜ್‌ಕೋಟ್‌ನ ನಿರಂಜನ್ ಷಾ ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆಯಲಿದೆ. ಸ್ಮತಿ ಮಂದನಾ ಸಾರಥ್ಯದಲ್ಲಿ ಭಾರತ ಶುಭಾರಂಭದ ನಿರೀಕ್ಷೆಯಲ್ಲಿದೆ.
ಐರ್ಲೆಂಡ್ ಎದುರು ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ಆಡುತ್ತಿರುವ ಭಾರತ ತಂಡಕ್ಕೆ, ಹಾಲಿ ವರ್ಷ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಈ ಸರಣಿ ಪೂರ್ವಸಿದ್ಧತೆ ಎನಿಸಿದೆ. ಹರ್ಮಾನ್‌ಪ್ರೀತ್ ಕೌರ್ ಗೈರಿನಲ್ಲಿ ಸ್ಮತಿ ತಂಡವನ್ನು ಮುನ್ನಡೆಸಲಿದ್ದು, ಕಳೆದ ವರ್ಷದ ಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಸ್ಮತಿ ವೆಸ್ಟ್ ಇಂಡೀಸ್ ಎದುರು ಸತತ ಐದು ಪಂದ್ಯದಲ್ಲಿ 50ಪ್ಲಸ್ ರನ್‌ಗಳಿಸಿದ್ದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿರುವ ಹರ್ಲೀನ್ ಡಿಯೋಲ್, ಜೆಮೀಮಾ ರೋಡ್ರಿಗಸ್ ಲಯ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದ್ದು, ಪ್ರತೀಕಾ ರಾವಲ್ ಭಾರತ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಆಲ್ರೌಂಡರ್ ದೀಪ್ತಿ ಶರ್ಮ ಉಪನಾಯಕಿಯ ಹೆಚ್ಚುವರಿ ಜವಾಬ್ದಾರಿ ಪಡೆದುಕೊಂಡಿದ್ದಾರೆ.
ಪ್ರಿಯಾ ಮಿಶ್ರಾ, ತನುಜಾ ಕನ್ವರ್ ಸ್ಪಿನ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಆಲ್ರೌಂಡರ್ ರಾಘವಿ ಬಿಷ್ಟ್, ಸಯಾಲಿ ಸತ್ಗೆರೆ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ರೇಣುಕಾ ಸಿಂಗ್ ಅನುಸ್ಥಿತಿಯಲ್ಲಿ ಟಿಟಾಸ್ ಸಧು, ಸೈಮಾ ಠಾಕೂರ್‌ಗೆ ಛಾಪು ಮೂಡಿಸಲು ಸರಣಿ ಉತ್ತಮ ವೇದಿಕೆ ಎನಿಸಿದೆ. ಜತೆಗ ನೈಜ ಸವಾಲು ಎದುರಾಗಿದೆ. ಭಾರತ ಇದುವರೆಗೆ ಐರ್ಲೆಂಡ್ ವಿರುದ್ಧ ಆಡಿರುವ 12 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದು, 2023ರ ಟಿ20 ವಿಶ್ವಕಪ್‌ನಲ್ಲಿ ಕೊನೆಯದಾಗಿ ಮುಖಾಮುಖಿಯಾಗಿದ್ದವು. ಆಗ ಭಾರತ 5 ರನ್‌ಗಳ ಗೆಲುವು ದಾಖಲಿಸಿತ್ತು.
ಏಕದಿನ ಸರಣಿ ವೇಳಾಪಟ್ಟಿ
ಜ.10 ಮೊದಲ ಪಂದ್ಯ
ಜ.12 ಎರಡನೇ ಪಂದ್ಯ
ಜ.15 ಮೂರನೇ ಪಂದ್ಯ
ಎಲ್ಲ ಪಂದ್ಯ ಆರಂಭ: ಬೆಳಗ್ಗೆ 11
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ