ಕ್ರೀಡೆ

ದುಲೀಪ್ ಟ್ರೋಫಿಯಲ್ಲಿ ಮಾಜಿ ನಾಯಕ ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಜುರೆಲ್: ಋತುರಾಜ್ ಪಡೆ ಶುಭಾರಂಭ

ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ (57 ರನ್, 121 ಎಸೆತ, 7 ಬೌಂಡರಿ) ಅರ್ಧಶತಕ ಹಾಗೂ ಆಕಾಶ್ ದೀಪ್ (43 ರನ್, 42 ಎಸೆತ, 3 ಬೌಂಡರಿ, 4 ಸಿಕ್ಸರ್) ಪ್ರತಿರೋಧದ ನಡುವೆಯೂ ಶುಭಮಾನ್ ಗಿಲ್ ಸಾರಥ್ಯದ ಭಾರತ ಎ ತಂಡ ಪ್ರತಿಷ್ಠಿತ ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಬಿ ತಂಡ ಎದುರು 74 ರನ್‌ಗಳಿಂದ ಸೋಲು ಅನುಭವಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಅಭಿಮನ್ಯು ಈಶ್ವರನ್ ಪಡೆ ಗೆಲುವಿನೊಂದಿಗೆ ಆರು ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

7: ಭಾರತ ಎ ತಂಡದ ಧ್ರುವ ಜುರೆಲ್ ದುಲೀಪ್ ಟ್ರೋಫಿ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಎಸ್ ಧೋನಿ (7) ದಾಖಲೆ ಸರಿಗಟ್ಟಿದರು. 2004-05ರ ಋತುವಿನಲ್ಲಿ ಪೂರ್ವ ವಲಯ ಪರ ಧೋನಿ ಈ ಸಾಧನೆ ಮಾಡಿದ್ದರು.

ಋತುರಾಜ್ ಪಡೆ ಶುಭಾರಂಭ: ಆನಂತಪುರದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಭಾರತ ಡಿ ಎದುರು ಭಾರತ ಸಿ ತಂಡ ಕೇವಲ ಮೂರೇ ದಿನಗಳಲ್ಲಿ ಗೆದ್ದು ಬೀಗಿದೆ. ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಮಾನವ್ ಸುಥಾರ್ (49ಕ್ಕೆ 7) ದಾಳಿಗೆ ತತ್ತರಿಸಿದ ಶ್ರೇಯಸ್ ಅಯ್ಯರ್ ನೇತೃತ್ವದ ಡಿ ತಂಡ, ಎರಡನೇ ಇನಿಂಗ್ಸ್‌ನಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು.

ಚೇಸಿಂಗ್‌ಗೆ ಇಳಿದ ಋತುರಾಜ್ ಸಾರಥ್ಯದ ಸಿ ತಂಡ, ಎರಡನೇ ಸರದಿಯಲ್ಲಿ 61 ಓವರ್‌ಗಳಲ್ಲಿ 6 ವಿಕೆಟ್‌ಗೆ 233 ರನ್‌ಗಳಿಸಿ ಪಂದ್ಯದಲ್ಲಿ ಇನ್ನು ಒಂದು ದಿನ ಬಾಕಿಯಿರವಂತೆಯೆ ಗೆಲುವು ಸಾಧಿಸಿ, 6 ಅಂಕ ಸಂಪಾದಿಸಿತು.

ಭಾರತ ಡಿ: 164 ಹಾಗೂ 236. ಭಾರತ ಸಿ: 168 ಹಾಗೂ 6 ವಿಕೆಟ್‌ಗೆ 233. ಪಂದ್ಯಶ್ರೇಷ್ಠ: ಮಾನವ್ ಸುಥಾರ್.