ಕ್ರೀಡೆ

ಐಪಿಎಲ್​ ಮೊದಲ ಪಂದ್ಯದಲ್ಲೇ ಸಹೋದರರ ಮುಖಾಮುಖಿ, ಇಕ್ಕಟ್ಟಿನಲ್ಲಿ ಮಾಲತಿ ಚಹರ್!

ಬೆಂಗಳೂರು: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ 13ನೇ ಆವೃತ್ತಿಗೆ ಚಾಲನೆ ಸಿಗಲು ಯುಎಇಯಲ್ಲಿ ವೇದಿಕೆ ಸಜ್ಜಾಗಿದೆ. ಆದರೆ ರೂಪದರ್ಶಿ ಮಾಲತಿ ಚಹರ್ ಅವರೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಯಾಕೆಂದರೆ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಅವರ ಸಹೋದರರ ತಂಡಗಳೇ ಮುಖಾಮುಖಿಯಾಗುತ್ತಿದ್ದು, ಯಾವ ತಂಡವನ್ನು ಬೆಂಬಲಿಸಬೇಕೆಂದು ಗೊತ್ತಾಗದೆ ಗೊಂದಲದಲ್ಲಿದ್ದಾರೆ.

ಚೆನ್ನೈ ಸೂಪರ್‌ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ರಾಹುಲ್ ಚಹರ್ ಅವರು ಮಾಲತಿ ಚಹರ್ ಅವರ ಸಹೋದರರಾಗಿದ್ದಾರೆ. ಈ ಹಿಂದೆ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಸಹೋದರರಿಬ್ಬರೂ ಜತೆಯಾಗಿ ಐಪಿಎಲ್ ಆಡಿದ್ದರು.

‘ಬಹುನಿರೀಕ್ಷಿತ ಐಪಿಎಲ್ ಮನರಂಜನೆಗೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ಮೊದಲ ಪಂದ್ಯದಲ್ಲಿ ಸಿಎಸ್‌ಕೆ-ಮುಂಬೈ ಮುಖಾಮುಖಿ ಮಾತ್ರವಲ್ಲ, ಚಹರ್ ವರ್ಸಸ್ ಚಹರ್ ಮುಖಾಮುಖಿಯೂ ನಡೆಯಲಿದೆ’ ಎಂದು ಮಾಲತಿ ಚಹರ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಸಹೋದರರಿಬ್ಬರ ಜತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಆಗ್ರಾದಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತ ಬೆಳೆದಿರುವ ದೀಪಕ್ ಚಹರ್ ಮತ್ತು ರಾಹುಲ್ ಸಹೋದರರು ದೇಶೀಯ ಕ್ರಿಕೆಟ್‌ನಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಾರೆ. ದೀಪಕ್ ಚಹರ್ ಅವರು ಮಾಲತಿ ಚಹರ್‌ಗೆ ಒಡಹುಟ್ಟಿದ ಸಹೋದರರಾಗಿದ್ದರೆ, ರಾಹುಲ್ ಚಹರ್ ಅವರು ತಾಯಿಯ ಸಹೋದರಿಯ ಮಗನಾಗಿದ್ದಾರೆ.

ಐಪಿಎಲ್‌ಗಾಗಿ ಯುಎಇಗೆ ಕಾಲಿಟ್ಟ ಬಳಿಕ ಕರೊನಾ ಸೋಂಕಿತರಾಗಿ ಕ್ವಾರಂಟೈನ್‌ನಲ್ಲಿದ್ದ ದೀಪಕ್ ಚಹರ್ ಅವರು ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಟೂರ್ನಿಯ ಬಯೋ-ಬಬಲ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ರಾಹುಲ್ ಚಹರ್ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಮುಖ ಸ್ಪಿನ್ನರ್ ಆಗಿ ಯುಎಇಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಉಪಯುಕ್ತರಾಗುವ ನಿರೀಕ್ಷೆಯಲ್ಲಿದ್ದಾರೆ.