ಕ್ರೀಡೆ

ವಿದರ್ಭಕ್ಕೆ ದಾನಿಶ್-ಕರುಣ್ ಆಸರೆ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದ ಕನ್ನಡಿಗ

ನಾಗ್ಪುರ: ಆರಂಭಿಕ ಆಘಾತದ ನಡುವೆಯೂ ಯುವ ಬ್ಯಾಟರ್ ದಾನಿಶ್ ಮಾಲೇವಾರ್ (138* ರನ್, 259 ಎಸೆತ, 14 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಕರುಣ್ ನಾಯರ್ (86 ರನ್, 188 ಎಸೆತ, 8 ಬೌಂಡರಿ, 1 ಸಿಕ್ಸರ್) ನಡೆಸಿದ ಭರ್ಜರಿ ಜತೆಯಾಟದ ನೆರವಿನಿಂದ ವಿದರ್ಭ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ೈನಲ್‌ನಲ್ಲಿ ಕೇರಳ ತಂಡಕ್ಕೆ ದಿಟ್ಟ ತಿರುಗೇಟು ನೀಡುವ ಮೂಲಕ ಮೊದಲ ದಿನದ ಗೌರವ ಸಂಪಾದಿಸಿದೆ.

ವಿಸಿಎ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ವಿದರ್ಭ 24 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ದಾನಿಶ್ ಹಾಗೂ ಕರುಣ್ ನಾಯರ್ 4ನೇ ವಿಕೆಟ್‌ಗೆ ಕಲೆಹಾಕಿದ 215 ರನ್‌ಗಳ ದ್ವಿಶತಕದ ಜತೆಯಾಟದ ಬಲದಿಂದ ಮೊದಲ ದಿನದಂತ್ಯಕ್ಕೆ ವಿದರ್ಭ 86 ಓವರ್‌ಗಳಲ್ಲಿ 4 ವಿಕೆಟ್‌ಗೆ 254 ರನ್‌ಗಳಿಸಿದ್ದು, ಬೃಹತ್ ಮೊತ್ತ ಕಲೆಹಾಕುವತ್ತ ಸಾಗಿದೆ. ದಾನಿಶ್ ಜತೆಯಾಗಿ ಯಶ್ ಠಾಕೂರ್ (5*) ಜತೆಯಾಗಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಿದರ್ಭ: 86 ಓವರ್‌ಗಳಲ್ಲಿ 4 ವಿಕೆಟ್‌ಗೆ 254 (ಪಾರ್ಥ್ ರೇಖಾಡೆ 0, ಧ್ರುವ ಶೋರೆ 16, ದರ್ಶನ್ 1, ದಾನಿಶ್ 138*, ಕರುಣ್ ನಾಯರ್ 86, ಯಶ್ ಠಾಕೂರ್ 5*, ನಿದೇಶ್ 33ಕ್ಕೆ 2).

ದ್ವಿಶತಕದ ಜತೆಯಾಟ

ದಿನದ ಮೊದಲ ಒಂದು ಗಂಟೆಯ ಆಟದಲ್ಲಿ ಆತಿಥೇಯ ವಿದರ್ಭಗೆ ಹಿನ್ನಡೆ ಎದುರಾಯಿತು. ಆರಂಭಿಕ ಪಾರ್ಥ್ ರೇಖಾಡೆ (0) ಮೊದಲ ಓವರ್‌ನಲ್ಲಿ ನಿದೇಶ್ ಎಸೆತದಲ್ಲಿ ಔಟಾದರು. ನಂತರ ದರ್ಶನ್ ನಲ್ಕಂಡೆ (1), ಧ್ರುವ ಶೋರೆ (16) ಸಹ ಬೇಗನೆ ಪೆವಿಲಿಯನ್ ಸೇರಿದರು. ಬೌಲಿಂಗ್ ಸ್ನೇಹಿ ಎನಿಸಿದ ಅಂಗಣದಲ್ಲಿ ಕೆಳ ಕ್ರಮಾಂಕದ ಬ್ಯಾಟರ್ ಗಳಿಗೆ ಬಡ್ತಿ ನೀಡಿದ ವಿದರ್ಭ ತಂಡ, ಇನ್ ಾರ್ಮ್ ಬ್ಯಾಟರ್‌ಗಳ ವಿಕೆಟ್ ಕಾಯ್ದುಕೊಂಡಿತು. ಆಗ ದಾನಿಶ್ ಹಾಗೂ ಕರುಣ್ ನಾಯರ್ ದಿಟ್ಟ ಜತೆಯಾಟದ ಮೂಲಕ ಕೇರಳಕ್ಕೆ ತಿರುಗೇಟು ನೀಡಿದರು.

ಇವರಿಬ್ಬರು 4ನೇ ವಿಕೆಟ್‌ಗೆ 414 ಎಸೆತಗಳಲ್ಲಿ 215 ರನ್ ಬಾರಿಸಿ, ಬೌಲರ್‌ಗಳಿಗೆ ಸವಾಲೊಡ್ಡಿದರು. ವಿದರ್ಭ ಭೋಜನಾ ವಿರಾಮಕ್ಕೆ 81 ರನ್‌ಗಳಿಸಿತು. ನಂತರ ಟೂರ್ನಿಯ 2ನೇ ಶತಕ ಬಾರಿಸಿದ 21 ವರ್ಷದ ದಾನಿಶ್ ಪದಾರ್ಪಣಾ ಆವೃತ್ತಿಯಲ್ಲಿ ಗಮನ ಸೆಳೆದರು. ಜತೆಗೆ 5 ಅರ್ಧಶತ ಸಹ ಬಾರಿಸಿದ್ದು, ಒಟ್ಟಾರೆ 695 ರನ್‌ಗಳಿಸಿದ್ದಾರೆ. ಇವರಿಗೆ 33 ವರ್ಷದ ಕರುಣ್ ಸೂಕ್ತ ಬೆಂಬಲ ಒದಗಿಸಿದರು. ಈ ಜತೆಯಾಟ ಮುರಿಯಲು ಸಚಿನ್ ಬೇಬಿ ಬಳಗ ಬೌಲರ್‌ಗಳು ಚಡಪಡಿಸಿದರು. ಚಹಾ ವಿರಾಮದ ಬಳಿಕವೂ ಇವರಿಬ್ಬರೂ ಆಟ ಮುಂದುವರಿಸಿದರೆ, 125 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕರುಣ್ ನಾಯರ್ ರನೌಟ್ ಆದರು. ನೈಟ್‌ವಾಚ್‌ಮನ್ ಯಶ್ ಠಾಕೂರ್ (5*) ಜತೆಯಾಗಿ ದಾನಿಶ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕರುಣ್ 8 ಸಾವಿರ ರನ್

ಕರ್ನಾಟಕದಿಂದ ವಲಸೆ ಹೋಗಿ ವಿದರ್ಭ ಪರ ಆಡುತ್ತಿರುವ ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದ್ದಾರೆ. 114ನೇ ಪಂದ್ಯ ಆಡುತ್ತಿರುವ ಕರುಣ್ ೈನಲ್‌ನಲ್ಲಿ 10 ರನ್‌ಗಳಿಸಿದಾಗ ಈ ಮೈಲಿಗಲ್ಲು ಸ್ಥಾಪಿಸಿದರು. 22 ಶತಕ ಸಿಡಿಸಿರುವ ಕರುಣ್‌ಗೆ ಇದು ವೈಯಕ್ತಿಕ 4ನೇ ರಣಜಿ ಟ್ರೋಫಿ ೈನಲ್ ಎನಿಸಿದೆ. 2013-14, 2014-15ರಲ್ಲಿ ಕರ್ನಾಟಕ ಪರ ಹಾಗೂ ಕಳೆದ ಆವೃತ್ತಿಯಲ್ಲಿ ವಿದರ್ಭ ಪರ ೈನಲ್ ಆಡಿದ್ದರು.