ಬೆಂಗಳೂರು: ಮ್ಯಾಕ್ನೀಲ್ ನೊರೊನ್ಹಾ (65* ರನ್, 50 ಎಸೆತ, 6 ಬೌಂಡರಿ, 2 ಸಿಕ್ಸರ್, 15ಕ್ಕೆ 2 ವಿಕೆಟ್) ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಎದುರು 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸತತ 3ನೇ ಗೆಲುವು ಕಂಡ ವೈಶಾಕ್ ವಿಜಯ್ ಕುಮಾರ್ ಬಳಗ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದೆ. ಮನೀಷ್ ಪಾಂಡೆ ಪಡೆ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಕೃಷ್ಣ ಶ್ರೀಜೀತ್ (65 ರನ್, 38 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾಗೂ ನಾಯಕ ಮನೀಷ್ ಪಾಂಡೆ (48*) ಜತೆಯಾಟದ ನೆರವಿನಿಂದ 6 ವಿಕೆಟ್‌ಗೆ 164 ರನ್ ಕೆಲಹಾಕಿತು. ಪ್ರತಿಯಾಗಿ ಗುಲ್ಬರ್ಗಾ, ಮ್ಯಾಕ್ನೀಲ್ ನೊರೊನ್ಹಾ ಹಾಗೂ ಆರ್. ಸ್ಮರಣ್ (56 ರನ್, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಜತೆಯಾಟದ ಬಲದಿಂದ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 165 ರನ್‌ಗಳಿಸಿ ಸುಲಭ ಗೆಲುವು ಕಂಡಿತು.
ಹುಬ್ಬಳ್ಳಿ ಟೈಗರ್ಸ್: 6 ವಿಕೆಟ್‌ಗೆ 164 (ಸಿಸೋಡಿಯಾ 6, ತಾಹ 12, ಶ್ರೀಜೀತ್ 65, ಪ್ರವೀಣ್ ದುಬೆ 8, ಮನೀಷ್ ಪಾಂಡೆ 48*, ಎಂಬಿ ದರ್ಶನ್ 13, ಮ್ಯಾಕ್ನೀಲ್ 15ಕ್ಕೆ2, ಅಭಿಲಾಷ್ 24ಕ್ಕೆ1).
ಗುಲ್ಬರ್ಗಾ ಮಿಸ್ಟಿಕ್ಸ್: 3 ವಿಕೆಟ್‌ಗೆ 165 (ಎಲ್‌ಆರ್ ಚೇತನ್ 12, ಆದರ್ಶ್ 14, ಮ್ಯಾಕ್ನೀಲ್ 65, ಸ್ಮರಣ್ 56, ವಿದ್ವತ್ 32ಕ್ಕೆ1).
ನಾಳೆಯ ಪಂದ್ಯಗಳು
ಶಿವಮೊಗ್ಗ ಲಯನ್ಸ್-ಮಂಗಳೂರು ಡ್ರ್ಯಾಗನ್ಸ್
ಆರಂಭ: ಮಧ್ಯಾಹ್ನ 1
ಬೆಂಗಳೂರು ಬ್ಲಾಸ್ಟರ್ಸ್ - ಗುಲ್ಬರ್ಗಾ ಮಿಸ್ಟಿಕ್ಸ್
ಆರಂಭ: ಸಂಜೆ 5.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.