ನವದೆಹಲಿ: ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಸೂಪರ್‌ಜೈಂಟ್ಸ್ ತಂಡದ ಲಾಂಛನವನ್ನು ಸೋಮವಾರ ಅನಾವರಣಗೊಳಿಸಲಾಯಿತು. ಕನ್ನಡಿಗ ಕೆಎಲ್ ರಾಹುಲ್ ‘ಎಲ್‌ಎಸ್‌ಜಿ’ ತಂಡವನ್ನು ಮುನ್ನಡೆಸಲಿದ್ದಾರೆ.
ಪೌರಾಣಿಕ ಪಕ್ಷಿ ಗರುಡ ಸ್ಫೂರ್ತಿಯಿಂದ ತಂಡದ ಲಾಂಛನವನ್ನು ರೆಕ್ಕೆ ಬಿಡಿಸಿಕೊಂಡ ಮಾದರಿಯಲ್ಲಿ ರೂಪಿಸಲಾಗಿದೆ. ರಕ್ಷಕ ಮತ್ತು ಕ್ಷಿಪ್ರವಾಗಿ ಚಲಿಸುವ ಅದರ ಶಕ್ತಿಯಿಂದಾಗಿ ಗರುಡದ ರೀತಿಯಲ್ಲೇ ಲಾಂಛನ ರೂಪಿಸಲಾಗಿದೆ. ತಂಡದ ಪಾನ್ ಇಂಡಿಯಾ ಸೂಚಕವಾಗಿ ರೆಕ್ಕೆಗೆ ತ್ರಿವರ್ಣದ ಬಣ್ಣ ನೀಡಲಾಗಿದೆ. ಪಕ್ಷಿಯ ದೇಹದ ಭಾಗಕ್ಕೆ ನೀಲಿ ಬಣ್ಣದ ಬ್ಯಾಟ್ ವಿನ್ಯಾಸಗೊಳಿಸಲಾಗಿದೆ. ಇದು ಕ್ರಿಕೆಟ್ ಆಟದ ಪ್ರತೀಕ. ನಡುವೆ ಕೇಸರಿ ಸೀಮ್ ಇರುವ ಕೆಂಪು ಚೆಂಡು ಇದೆ. ಇದು ‘ಜಯ ತಿಲಕ’ದ ಪ್ರತೀಕ ಎಂದು ಲಖನೌ ಸೂಪರ್‌ಜೈಂಟ್ಸ್ ಫ್ರಾಂಚೈಸಿ ವಿವರಿಸಿದೆ.
ಉನ್ನತ ಸಾಧನೆ ಮತ್ತು ಯಶಸ್ಸು ಕಾಣಲು ಸಕಾರಾತ್ಮಕ ಶಕ್ತಿ ತುಂಬುವಂತೆ ಈ ಲಾಂಛನ ರೂಪಿಸಲಾಗಿದೆ. ಲಖನೌ ಸೂಪರ್‌ಜೈಂಟ್ಸ್ ತಂಡ ಪ್ರತಿ ಭಾರತೀಯರಿಗಾಗಿ ಇರುವ ತಂಡ. ಇದು ದೇಶವನ್ನು ಒಗ್ಗೂಡಿಸುವ ತಂಡ ಎಂದು ತಿಳಿಸಲಾಗಿದೆ. ದಾಖಲೆಯ 7,090 ಕೋಟಿ ರೂ. ಮೊತ್ತಕ್ಕೆ ಈ ತಂಡ ಉದ್ಯಮಿ ಸಂಜೀವ್ ಗೋಯೆಂಕಾ ಪಾಲಾಗಿತ್ತು.