ನವದೆಹಲಿ: ಉದ್ಘಾಟನಾ ಆವೃತ್ತಿಯ ದೆಹಲಿ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ಶನಿವಾರ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ನಾರ್ಥ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಶಿಖರ್ ಧವನ್ ಸಹ ಮಾಲೀಕತ್ವದ ಸೌಥ್ ಡೆಲ್ಲಿ ಸೂಪರ್‌ಸ್ಟಾರ್ಸ್ ತಂಡ ರನ್‌ಹೊಳೆ ಹರಿಸಿ ಬರೋಬ್ಬರಿ 308 ರನ್ ಕಲೆಹಾಕುವ ಮೂಲಕ ಟಿ20ಯಲ್ಲಿ ಎರಡನೇ ಗರಿಷ್ಠ ಮೊತ್ತ ದಾಖಲಿಸಿದೆ. ಜತೆಗೆ 300ಕ್ಕೂ ಅಧಿಕ ರನ್‌ಗಳಿಸಿದ ಭಾರತದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಸೌಥ್ ಡೆಲ್ಲಿ ತಂಡ ಐಪಿಎಲ್ ತಾರೆ 24 ವರ್ಷದ ಆಯುಷ್ ಬಡೋನಿ (165 ರನ್, 55 ಎಸೆತ, 8 ಬೌಂಡರಿ, 19 ಸಿಕ್ಸರ್) ಹಾಗೂ ಪ್ರಿಯಾಂಶ್ ಆರ್ಯ (120 ರನ್, 50 ಎಸೆತ, 10 ಬೌಂಡರಿ, 10 ಸಿಕ್ಸರ್) ಜೋಡಿ 99 ಎಸೆತದಲ್ಲಿ 286 ರನ್‌ಗಳ ಭರ್ಜರಿ ಜತೆಯಾಟವಾಡಿದ ಬಲದಿಂದ 5 ವಿಕೆಟ್‌ಗೆ 308 ರನ್ ದಾಖಲಿಸಿತು. ಬಡೋನಿ-ಪ್ರಿಯಾಂಶ್ ನಡುವಿನ ಜತೆಯಾಟ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ದಾಖಲಾದ ಗರಿಷ್ಠ ರನ್ ಜತೆಯಾಟ ಎನಿಸಿದರೆ, ಬಡೋನಿ ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು. ಜತೆಗೆ ಇನಿಂಗ್ಸ್‌ನಲ್ಲಿ ಗರಿಷ್ಠ 19 ಸಿಕ್ಸರ್ ಬಾರಿಸಿ ಕ್ರಿಸ್‌ಗೇಲ್ (18) ದಾಖಲೆ ಮುರಿದರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 147 ರನ್ ಗಳಿಸಿದ್ದು ಹಿಂದಿನ ಭಾರತೀಯ ದಾಖಲೆ ಆಗಿತ್ತು.
ಇದಕ್ಕೂ ಮುನ್ನ ಇದೇ ಇನಿಂಗ್ಸ್‌ನಲ್ಲಿ ಓವರ್‌ಗೆ ಸತತ 6 ಸಿಕ್ಸರ್ ಸಿಡಿಸಿದ ಎಡಗೈ ಬ್ಯಾಟರ್ ಪ್ರಿಯಾಂಶ್ ಆರ್ಯ ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆ ಸರಿಗಟ್ಟಿದರು. ಇದರೊಂದಿಗೆ ಟಿ20ಯ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಒಟ್ಟಾರೆ 5ನೇ ಬ್ಯಾಟರ್ ಎನಿಸಿದರು. ಮನನ್ ಭಾರಧ್ವಾಜ್ ಎಸೆದ ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಪ್ರಿಯಾಂಶ್ ಈ ಸಾಧನೆ ಮಾಡಿದರು. 308 ರನ್ ಚೇಸಿಂಗ್‌ಗೆ ಇಳಿದ ನಾರ್ಥ್ ಡೆಲ್ಲಿ ಸ್ಟ್ರೈಕರ್ಸ್ ತಂಡ 8 ವಿಕೆಟ್‌ಗೆ 196 ರನ್‌ಗಳಿಸಿ 112 ರನ್‌ಗಳ ಸೋಲು ಅನುಭವಿಸಿತು.