ಕ್ರೀಡೆ

ಐಪಿಎಲ್ ತಂಡಗಳ ಸಂಖ್ಯೆ ಹೆಚ್ಚಿಸಲು ಇದು ಸಕಾಲ ಎಂದು ದ್ರಾವಿಡ್ ಹೇಳಿದ್ದೇಕೆ ಗೊತ್ತೇ?

ನವದೆಹಲಿ: ಮುಂದಿನ ಐಪಿಎಲ್ ಟೂರ್ನಿಗೆ ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ ಮುಂದಾಗಿರುವ ಕ್ರಮವನ್ನು ಸ್ವಾಗತಿಸಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್, ‘ದೇಶದಲ್ಲಿ ಈಗ ಅಪಾರವಾದ ಕ್ರಿಕೆಟ್ ಪ್ರತಿಭೆಗಳು ಲಭ್ಯವಿದ್ದು, ಗುಣಮಟ್ಟದ ಜತೆಗೆ ಯಾವುದೇ ರಾಜಿ ಮಾಡಿಕೊಳ್ಳದೆ ಐಪಿಎಲ್ ಟೂರ್ನಿಯನ್ನು ವಿಸ್ತರಿಸಲು ಇದು ಸಕಾಲ’ ಎಂದು ಹೇಳಿದ್ದಾರೆ.

‘ನನ್ನ ಪ್ರಕಾರ, ಲಭ್ಯ ಪ್ರತಿಭೆಗಳ ದೃಷ್ಟಿಯಿಂದ ಐಪಿಎಲ್ ಟೂರ್ನಿ ವಿಸ್ತರಣೆಗೆ ಸಿದ್ಧವಾಗಿದೆ. ದೇಶದಲ್ಲಿ ಈಗ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದು, ಅವರಲ್ಲಿ ಸಾಕಷ್ಟು ಜನರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶವೇ ಲಭ್ಯವಾಗುತ್ತಿಲ್ಲ. ಹೀಗಾಗಿ ಐಪಿಎಲ್‌ಗೆ ಹೊಸ ತಂಡಗಳ ಸೇರ್ಪಡೆಯಾದರೆ ಇನ್ನಷ್ಟು ಪ್ರತಿಭಾನ್ವಿತ ಆಟಗಾರರಿಗೆ ಆಡುವ ಅವಕಾಶ ಲಭಿಸಲಿದೆ’ ಎಂದು ದ್ರಾವಿಡ್ ಹೇಳಿದ್ದಾರೆ.

5ನೇ ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿದ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನ ಬಗ್ಗೆಯೂ ವಿಶ್ಲೇಷಣೆ ಮಾಡಿರುವ ದ್ರಾವಿಡ್, ‘ಮುಂಬೈ ತಂಡದ ತಿರುಳು ಗಟ್ಟಿಯಾಗಿದೆ. ವಿಶ್ವದರ್ಜೆಯ ಟಿ20 ಆಟಗಾರರ ಜತೆಗೆ ಯುವ ಪ್ರತಿಭಾನ್ವಿತರಿದ್ದಾರೆ. ತಂಡದ ಸ್ವರೂಪವೂ ಬಲಿಷ್ಠವಾಗಿದೆ’ ಎಂದಿದ್ದಾರೆ.

ಐಪಿಎಲ್ ಟೂರ್ನಿಯ ಯಶಸ್ಸಿನ ಗುಟ್ಟನ್ನು ಕೂಡ ವಿವರಿಸಿದ ದ್ರಾವಿಡ್, ಈಗ ಕ್ರಿಕೆಟ್ ಪ್ರತಿಭೆಗಳು ಅವಕಾಶಕ್ಕಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನಷ್ಟೇ ನೆಚ್ಚಿಕೊಳ್ಳಬೇಕಾಗಿಲ್ಲ. ಉದಾಹರಣೆಗೆ ಹರಿಯಾಣದಂಥ ರಾಜ್ಯದಲ್ಲಿ ಯಜುವೇಂದ್ರ ಚಾಹಲ್, ಅಮಿತ್ ಮಿಶ್ರಾ, ರಾಹುಲ್ ತೆವಾಟಿಯಾ ಮತ್ತು ಜಯಂತ್ ಯಾದವ್ ಅವರಂಥ ಹಲವು ಸ್ಪಿನ್ ಪ್ರತಿಭೆಗಳಿದ್ದಾರೆ. ಐಪಿಎಲ್‌ನಿಂದಾಗಿ ಅವರಿಗೆ ಹೆಚ್ಚಿನ ಅವಕಾಶ ಸಿಗುವಂತಾಗಿದೆ. ಇಲ್ಲದಿದ್ದರೆ ಅವರು ರಣಜಿ ಟ್ರೋಫಿಯಲ್ಲಷ್ಟೇ ಆಡಬೇಕಾಗುತ್ತಿತ್ತು ಎಂದಿದ್ದಾರೆ.

ಭಾರತ ತಂಡ ಇತ್ತೀಚೆಗಿನ ವರ್ಷಗಳಲ್ಲಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸುವಲ್ಲೂ ಐಪಿಎಲ್‌ನ ಕೊಡುಗೆ ಸಾಕಷ್ಟಿದೆ ಎಂದಿರುವ ದ್ರಾವಿಡ್, ‘ಭಾರತ ತಂಡ ಏಕದಿನ ವಿಶ್ವಕಪ್ (2011), ಚಾಂಪಿಯನ್ ಟ್ರೋಫಿ (2013) ಗೆದ್ದಿರುವುದಲ್ಲದೆ, ಹಲವು ಐಸಿಸಿ ಟೂರ್ನಿಗಳಲ್ಲಿ ಸೆಮಿಫೈನಲ್, ಫೈನಲ್ ಪ್ರವೇಶಿಸುವಲ್ಲೂ ಯಶಸ್ವಿಯಾಗಿದೆ. ಐಪಿಎಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜತೆ ಆಡುವ ಅವಕಾಶದಿಂದಾಗಿ ಯುವ ಕ್ರಿಕೆಟಿಗರು ಉತ್ತಮ ಬೆಳವಣಿಗೆ ಕಾಣುತ್ತಿದ್ದಾರೆ’ ಎಂದಿದ್ದಾರೆ.