ಕ್ರೀಡೆ

Asia Cup; ಕ್ರೀಡೆಯಿಂದ ರಾಜಕೀಯ ದೂರವಿರಲಿ ಎಂದ ಪಾಕ್​​ ವೇಗಿ ವಾಸಿಮ್​​ ಅಕ್ರಮ್​​

Asia Cup: ಏಷ್ಯಾ ಕಪ್‌ನಲ್ಲಿ ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಬುಧವಾರ (ಆಗಸ್ಟ್​​ 20) ಪ್ರತಿಕ್ರಿಯಿಸಿರುವ ಪಾಕ್​​ ಮಾಜಿ ಆಟಗಾರ ವಾಸಿಮ್ ಅಕ್ರಮ್, ಇದರಲ್ಲಿ ರಾಜಕೀಯವನ್ನು ಬದಿಗಿಡಬೇಕು ಎಂದಿದ್ದಾರೆ.

ಸ್ಟಿಕ್ ವಿತ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಅಕ್ರಮ್, ಕ್ರೀಡೆಯಿಂದ ರಾಜಕೀಯವನ್ನು ದೂರವಿಡುವುದು ಉತ್ತಮ, ಏಷ್ಯಾ ಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಯಾರು ಆಡುತ್ತಾರೋ ಇಲ್ಲವೋ, ಆಟ ಮಾತ್ರ ಮುಂದುವರಿಯಲೇಬೇಕು ಎಂದರು.

ತಮ್ಮ ಜೀವಿತಾವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕನಿಷ್ಠ ಒಂದು ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಆಡುವುದನ್ನು ನೋಡಲು ಆಶಿಸುವುದಾಗಿ ಅಕ್ರಮ್ ಹೇಳಿಕೊಂಡಿದ್ದಾರೆ. 2012 ರಿಂದ ಎರಡೂ ನೆರೆಯ ರಾಷ್ಟ್ರಗಳು ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ ಎನ್ನುವುದು ಗಮನಾರ್ಹ. ಏಪ್ರಿಲ್ ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ನಂತರ ಪಾಕಿಸ್ತಾನ ವಿರುದ್ಧ ಆಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಒಪ್ಪಿಗೆ ನೀಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. (ಏಜೆನ್ಸೀಸ್)