ಕ್ರೀಡೆ

ಭಾರತಕ್ಕೆ ವಿಶ್ವಕಪ್​ ಗೆದ್ದುಕೊಟ್ಟ ಮೈದಾನದಲ್ಲಿ ಕೊನೇ ಪಂದ್ಯ ಆಡಲು ಸಜ್ಜಾದ ಧೋನಿ?

ಮುಂಬೈ: ಭಾರತಕ್ಕೆ 2011ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭರ್ಜರಿ ಸಿಕ್ಸರ್​ ಸಿಡಿಸುವ ಮೂಲಕ ಗೆಲುವು ತಂದುಕೊಟ್ಟ ವಾಂಖೆಡೆ ಕ್ರೀಡಾಂಗಣದಲ್ಲಿ ಎಂಎಸ್​ ಧೋನಿ ಭಾನುವಾರ ಬಹುತೇಕ ಕೊನೇ ಪಂದ್ಯ ಆಡಲಿದ್ದಾರೆ.

42 ವರ್ಷದ ಧೋನಿಗೆ ಇದೇ ಕೊನೇ ಐಪಿಎಲ್​ ಟೂರ್ನಿ ಎನ್ನಲಾಗಿದ್ದು, ಅದು ದೃಢವಾದರೆ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯ ಅವರ ಪಾಲಿಗೆ ಇಲ್ಲಿ ಕೊನೇ ಪಂದ್ಯವಾಗಲಿದೆ. 2005ರ ನವೆಂಬರ್​ನಲ್ಲಿ ಧೋನಿ ಭಾರತ ಪರ ಇಲ್ಲಿ ಚೊಚ್ಚಲ ಪಂದ್ಯವಾಡಿದ್ದರು. ಬಳಿಕ ಟೀಮ್​ ಇಂಡಿಯಾ ಮಾತ್ರವಲ್ಲದೆ, ಸಿಎಸ್​ಕೆ ಪರವೂ ಅವರು ವಾಂಖೆಡೆಯಲ್ಲಿ ಹಲವು ಸ್ಮರಣೀಯ ನೆನಪುಗಳನ್ನು ಹೊಂದಿದ್ದಾರೆ. ಇದರಿಂದ ಆತಿಥೇಯ ಪ್ರೇಕ್ಷಕರು ಮುಂಬೈ-ಧೋನಿ ನಡುವೆ ಯಾರನ್ನು ಬೆಂಬಲಿಸುವುದು ಎಂಬ ಗೊಂದಲವನ್ನೂ ಎದುರಿಸಲಿದ್ದಾರೆ.