ಕ್ರೀಡೆ

ಬೆಂಗಳೂರು ಓಪನ್​ನಲ್ಲಿ ಪೇಸ್ ಕಣಕ್ಕೆ: ದಿಗ್ಗಜನಿಗೆ ಭಾರತದಲ್ಲಿ ಕೊನೆಯ ಟೆನಿಸ್ ಟೂರ್ನಿ, ಡಬಲ್ಸ್ ವಿಭಾಗದಲ್ಲಿ ಸ್ಪರ್ಧೆ

ಬೆಂಗಳೂರು: ವೃತ್ತಿಜೀವನದ ಕೊನೆಯ ಟೆನಿಸ್ ಋತುವಿನಲ್ಲಿ ಆಡುತ್ತಿರುವ ಭಾರತದ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್ ಫೆಬ್ರವರಿ 10ರಿಂದ ನಡೆಯಲಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದರಿಂದ 46 ವರ್ಷದ ಪೇಸ್ ಬೆಂಗಳೂರಿನಲ್ಲಿ ತಮ್ಮ ತವರು ನೆಲದ ಕೊನೆಯ ಟೂರ್ನಿ ಆಡಿದಂತಾಗಲಿದೆ. ಇದಕ್ಕೆ ಮುನ್ನ ಅವರು ಈ ವಾರ ಪುಣೆಯಲ್ಲೇ ತವರಿನ ಕೊನೆಯ ಟೂರ್ನಿ ಆಡಲಿದ್ದಾರೆ ಎನ್ನಲಾಗಿತ್ತು.

ಕೆಎಸ್​ಎಲ್​ಟಿಎಯಲ್ಲಿ ನಡೆಯಲಿರುವ ಒಟ್ಟು 1.15 ಕೋಟಿ ರೂ. ಬಹುಮಾನ ಮೊತ್ತದ ಟೂರ್ನಿಯಲ್ಲಿ ಪೇಸ್ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. 30 ವರ್ಷಗಳ ವೃತ್ತಿಜೀವನದ ಕೊನೇ ವರ್ಷದಲ್ಲಿ ಅವರು ಆಯ್ದ ಟೂರ್ನಿಗಳಲ್ಲಿ ಮಾತ್ರ ಆಡುತ್ತಿದ್ದಾರೆ. ‘ತವರಿನ ಜನರೆದುರು ಆಡುವುದು ಯಾವಾಗಲೂ ಖುಷಿಯ ವಿಚಾರ. ಬೆಂಗಳೂರಿನ ಪ್ರೇಕ್ಷಕರು ಟೆನಿಸ್ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಬೆಂಗಳೂರಿನ ಕ್ರೀಡಾಂಗಣ ಮತ್ತು ನಗರ ಉತ್ಸಾಹ ನನಗೆ ನಿಜಕ್ಕೂ ಸ್ಪೂರ್ತಿ ತುಂಬುತ್ತದೆ. ಬೆಂಗಳೂರಿನಲ್ಲಿ ಕೊನೇ ಬಾರಿ ಗರ್ಜಿಸಲು ಕಾತರಗೊಂಡಿದ್ದೇನೆ’ ಎಂದು ಪೇಸ್ ಹೇಳಿದ್ದಾರೆ. 2014ರ ಡೇವಿಸ್ ಕಪ್​ನಲ್ಲಿ ಅವರು ಕೊನೇ ಬಾರಿ ಬೆಂಗಳೂರಿನಲ್ಲಿ ಆಡಿದ್ದರು.

54 ಎಟಿಪಿ ಟೂರ್ ಡಬಲ್ಸ್, 8 ಗ್ರಾಂಡ್ ಸ್ಲಾಂ ಪುರುಷರ ಡಬಲ್ಸ್ ಮತ್ತು 10 ಗ್ರಾಂಡ್ ಸ್ಲಾಂ ಮಿಶ್ರ ಡಬಲ್ಸ್ ಪ್ರಶಸ್ತಿ ಒಡೆಯರಾಗಿರುವ 1996ರ ಅಟ್ಲಾಂಟ ಒಲಿಂಪಿಕ್ಸ್ ಕಂಚು ವಿಜೇತ ಪೇಸ್, ಈ ವರ್ಷದ ಉಳಿದ ಮೂರೂ ಗ್ರಾಂಡ್ ಸ್ಲಾಂಗಳಲ್ಲಿ ಆಡಿದರೆ 100 ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಆಡಿದ ಸಾಧನೆ ಮಾಡಲಿದ್ದಾರೆ.

ಬೋಪಣ್ಣ ಜೋಡಿ ನಿರ್ಗಮನ

ಪುಣೆ: ಭಾರತದ ರೋಹನ್ ಬೋಪಣ್ಣ ಮತ್ತು ಅರ್ಜುನ್ ಖಾಡೆ ಜೋಡಿ ಟಾಟಾ ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ. ಬೋಪಣ್ಣ-ಖಾಡೆ ಜೋಡಿ 6-3, 5-7, 7-10ರಿಂದ ಫ್ರಾನ್ಸ್​ನ ಬೆನಾಯ್್ಟ ಪೈರ್ ಮತ್ತು ಆಂಟೋನಿ ಹೊವಾಂಗ್ ಜೋಡಿ ವಿರುದ್ಧ ಸೋಲು ಕಂಡಿತು. ಬೋಪಣ್ಣ ಕಳೆದ ವರ್ಷ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆಜ್ ಜತೆಗೂಡಿ ಆಡುತ್ತಿರುವ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಕ್ವಾರ್ಟರ್​ಫೈನಲ್​ನಲ್ಲಿ ಭಾರತದವರೇ ಆದ ಪೂರವ್ ರಾಜಾ-ರಾಮ್ುಮಾರ್ ರಾಮನಾಥನ್ ಜೋಡಿಯನ್ನು ಎದುರಿಸಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಪ್ರಜ್ಞೇಶ್ ಗುಣೇಶ್ವರನ್, 16ರ ಘಟ್ಟದಲ್ಲಿ ಕೊರಿಯಾದ ಕ್ವಾನ್ ಸೂನ್-ವೂ ವಿರುದ್ಧ 3-6, 6-7ರಿಂದ ಸೋತಿದ್ದು, ಭಾರತದ ಸವಾಲು ಅಂತ್ಯಗೊಂಡಿದೆ.