ಕ್ರೀಡೆ

ನಿವೃತ್ತಿ ನಂತರ ಕೋಚಿಂಗ್​ನತ್ತ ಪೇಸ್ ಗಮನ

ಪುಣೆ: ವೃತ್ತಿಜೀವನದ ಕೊನೆಯ ಟೆನಿಸ್ ಋತುವಿನಲ್ಲಿ ಕಣಕ್ಕಿಳಿದಿರುವ ಲಿಯಾಂಡರ್ ಪೇಸ್, ನಿವೃತ್ತಿಯ ನಂತರ ರಾಹುಲ್ ದ್ರಾವಿಡ್ ಮತ್ತು ಪುಲ್ಲೇಲಾ ಗೋಪಿಚಂದ್ ಅವರಂತೆ ಚಾಂಪಿಯನ್ ಆಟಗಾರರನ್ನು ರೂಪಿಸುವತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.

ದ್ರಾವಿಡ್ 19 ವಯೋಮಿತಿ ಮತ್ತು ಭಾರತ ಎ ತಂಡದ ಕೋಚ್ ಆಗಿ ಪ್ರತಿಭಾನ್ವಿತ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರೆ, ಗೋಪಿಚಂದ್ ಒಲಿಂಪಿಕ್ಸ್ ಪದಕ ವಿಜೇತ ಷಟ್ಲರ್​ಗಳಾದ ಸೈನಾ ನೆಹ್ವಾಲ್, ಪಿವಿ ಸಿಂಧು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ‘ನನ್ನ 2ನೇ ಇನಿಂಗ್ಸ್​ನಲ್ಲೂ ಸಾಕಷ್ಟು ಕೆಲಸಗಳಿವೆ. ನಾನು ಸಮರ್ಥವಾಗಿ ಕಾರ್ಯನಿರ್ವಹಿಸುವೆನೇ ಎಂಬುದು ಗೊತ್ತಿಲ್ಲ. ಆದರೆ ಗ್ರಾಂಡ್ ಸ್ಲಾಂ ಗೆಲ್ಲಬಲ್ಲ ಮತ್ತು ಒಲಿಂಪಿಕ್ಸ್​ನಲ್ಲಿ ಆಡಬಲ್ಲ ಸಾಮರ್ಥ್ಯದ ಆಟಗಾರರನ್ನು ಶೋಧಿಸಲಿದ್ದೇನೆ’ ಎಂದಿದ್ದಾರೆ.

‘ಭಾರತದಲ್ಲಿ ಟೆನಿಸ್​ಗೆ ಪುನರುತ್ಥಾನದ ಅಗತ್ಯವಿದೆ. ಈಗ ಐಪಿಎಲ್ ಮಾತ್ರವಲ್ಲದೆ, ಟೇಬಲ್ ಟೆನಿಸ್, ಬಾಕ್ಸಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಕಬಡ್ಡಿಯಲ್ಲೂ ಲೀಗ್​ಗಳಿದ್ದು, ಕ್ರೀಡಾಸ್ಪರ್ಧೆಗಳು ಸಾಕಷ್ಟು ಹೆಚ್ಚಿವೆ. ಈ ಸಮಯದಲ್ಲಿ ಟೆನಿಸ್​ಗೆ ಹೆಚ್ಚಿನ ಮಕ್ಕಳನ್ನು ಸೆಳೆಯಬೇಕಾಗಿದೆ’ ಎಂದು 46 ವರ್ಷದ ಪೇಸ್ ಹೇಳಿದ್ದಾರೆ. ಅವರು ಮುಂದಿನ ವಾರ ಬೆಂಗಳೂರು ಓಪನ್​ನಲ್ಲಿ ಆಡಲಿದ್ದಾರೆ.