ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ; ಫಾಲೋಆನ್​ ಭೀತಿಯಲ್ಲಿ Team India

ಮೆಲ್ಬೋರ್ನ್​: ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ (Boxing Day Test) ಭಾರತ ತಂಡವು (Team India) ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 164 ರನ್​ಗಳಿಸಿದ್ದು, 310 ರನ್​ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿರುವ ಭಾರತ ತಂಡವು ಯಶಸ್ವಿ ಜೈಸ್ವಾಲ್​ ಹೊರತುಪಡಿಸಿದರೆ ಉಳಿದ ಆಟಗಾರರಿಂದ ಉಪಯುಕ್ತ ಆಟ ಬಂದಿಲ್ಲ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದಿಂದಲೂ ಭರ್ಜರಿ ಹಿಡಿತವನ್ನು ಸಾಧಿಸಿದ್ದು, ಎರಡನೇ ದಿನವೂ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ವಿರಾಟ್​ ಕೊಹ್ಲಿ ಜತೆ 102 ರನ್​ಗಳ ಜತೆಯಾಟವಾಡಿದ್ದ ಯಶಸ್ವಿ ಜೈಸ್ವಾಲ್​ (82 ರನ್, 118 ಎಸೆತ, 11 ಬೌಂಡರಿ, 1 ಸಿಕ್ಸರ್​) ರನ್​ಔಟ್​ ಆಗಿದ್ದು ಟೀಮ್​ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದ್ದು, ಆ ನಂತರ ವಿಕೆಟ್​ಗಳು ಬೇಗನೆ ಪತನವಾಗಲು ಶುರುವಾಯಿತು. ಸದ್ಯ ರವೀಂದ್ರ ಜಡೇಜಾ ಹಾಗೂ ರಿಷಭ್​ ಪಂತ್​ 6, 4 ರನ್​ ಕಲೆಹಾಕಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಇನ್ನೂ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್​ ಶರ್ಮ ಈ ಸಲುವಾಗಿಯೇ 11ರ ಬಳಗದಲ್ಲಿ ಬದಲಾವಣೆಯನ್ನು ಮಾಡಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ರಾಹುಲ್​ ಕೂಡ 24 ರನ್​ಗಳಿಗೆ ಔಟಾಗಿದ್ದು, ವಿರಾಟ್​ ಕೊಹ್ಲಿ  36 ರನ್​ಗಳಿಗೆ ಔಟಾಗಿದ್ದಾರೆ. ಸದ್ಯ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ ತಂಡವು 2024ಅನ್ನು ಗೆಲುವಿನ ಮೂಲಕ ವಿದಾಯ ಹೇಳಲು ತಯಾರಿ ಮಾಡಿಕೊಂಡಿದೆ. ಆಸ್ಟ್ರೇಲಿಯಾ ಪರ ಪ್ಯಾಟ್​ ಕಮ್ಮಿನ್ಸ್​ (12-2-57-2), ಸ್ಕಾಟ್​ ಬೋಲ್ಯಾಂಡ್​ (12-3-24-2) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.