ಕೊಲಂಬೊ: ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) ಟಿ20 ಟೂರ್ನಿಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿ) ಮಂಗಳವಾರ ದಿಢೀರ್ ಮುಂದೂಡಿದೆ. ದ್ವೀಪರಾಷ್ಟ್ರದಲ್ಲಿ ಕರೊನಾ ವೈರಸ್ ಕಾರಣದಿಂದಾಗಿ ವಿದೇಶಿ ಆಟಗಾರರು 14 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಪಡಬೇಕಾದ ನಿಬಂಧನೆಯಿಂದಾಗಿ ಎಲ್ಪಿಎಲ್ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟೂರ್ನಿ ಆಗಸ್ಟ್ 28ರಂದು ಆರಂಭಗೊಳ್ಳುವುದೆಂದು ನಿಗದಿಯಾಗಿತ್ತು. ಆದರೆ ವಿದೇಶಿ ಆಟಗಾರರು 14 ದಿನಗಳ ಕ್ವಾರಂಟೈನ್ಗೆ ಒಳಪಡುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿರುವುದರಿಂದ, ಟೂರ್ನಿಗೆ ಪ್ರಮುಖ ವಿದೇಶಿ ಆಟಗಾರರು ಅಲಭ್ಯವಾಗುವ ಭೀತಿ ಕಾಣಿಸಿಕೊಂಡಿತ್ತು. ಅಲ್ಲದೆ ಟೂರ್ನಿಗೆ ಇನ್ನು ಕೇವಲ 17 ದಿನಗಳು ಮಾತ್ರ ಬಾಕಿ ಉಳಿದಿದ್ದ ಕಾರಣ, ಕ್ವಾರಂಟೈನ್ ನಿಬಂಧನೆಗಳಿಂದಾಗಿ ಟೂರ್ನಿಯನ್ನು ಆಗಸ್ಟ್ ಅಂತ್ಯದ ವೇಳೆಗೆ ಆರಂಭಿಸುವುದು ಅಸಾಧ್ಯವೆನಿಸಿತ್ತು.
ಎಲ್ಪಿಎಲ್ ಟೂರ್ನಿ ಇನ್ನು ಐಪಿಎಲ್ ನಂತರದಲ್ಲಿ ನವೆಂಬರ್ನಲ್ಲಿ ಆಯೋಜಿಸಲಾಗುವುದು ಎಂದು ಎಸ್ಎಲ್ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ತಿಳಿಸಿದ್ದಾರೆ. ಐಪಿಎಲ್ ಟೂರ್ನಿ ನವೆಂಬರ್ 10ರಂದು ಮುಕ್ತಾಯಗೊಳ್ಳಲಿದ್ದರೆ, ಎಲ್ಪಿಎಲ್ ಟೂರ್ನಿ ನವೆಂಬರ್ ಮಧ್ಯಭಾಗದ ನಂತರ ಮರುನಿಗದಿಯಾಗುವ ನಿರೀಕ್ಷೆ ಇದೆ.
5 ತಂಡಗಳು ಆಡಬೇಕಿರುವ ಎಲ್ಪಿಎಲ್ ಟೂರ್ನಿಯ 23 ಪಂದ್ಯಗಳು, ಶ್ರೀಲಂಕಾದ 4 ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ನಿಗದಿಯಾಗಿದ್ದವು. ಟೂರ್ನಿಯಲ್ಲಿ ಒಟ್ಟು 93 ವಿದೇಶಿ ಕ್ರಿಕೆಟಿಗರು ಪಾಲ್ಗೊಳ್ಳುವ ನಿರೀಕ್ಷೆ ಇಡಲಾಗಿತ್ತು.