ಕ್ರೀಡೆ

ಲಂಕಾ ಟಿ20 ಲೀಗ್ ಪಂದ್ಯಗಳನ್ನು ಭಾರತದಲ್ಲಿ ಯಾವ ಚಾನಲ್‌ನಲ್ಲಿ ನೋಡಬಹುದು ಗೊತ್ತೇ?

ನವದೆಹಲಿ: ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಐಪಿಎಲ್ ಟೂರ್ನಿಯ ಯಶಸ್ಸಿನ ಬಳಿಕ ಕರೊನಾ ಕಾಲದ ಮತ್ತೊಂದು ಟಿ20 ಲೀಗ್‌ಗೆ ಶ್ರೀಲಂಕಾದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಟೂರ್ನಿಯ ಮೂಲಕ ಚುಟುಕು ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಮ್ಮೆ ಭರ್ಜರಿ ಮನರಂಜನೆ ಎದುರಾಗಲಿದೆ. ನೆರೆಯ ಲಂಕಾದಲ್ಲಿ ನಡೆಯುವ ಈ ಟಿ20 ಹಬ್ಬದ ನೇರಪ್ರಸಾರವನ್ನು ಭಾರತದ ಕ್ರಿಕೆಟ್ ಪ್ರೇಮಿಗಳೂ ಸವಿಯಬಹುದಾಗಿದೆ.

ಲಂಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ಪಂದ್ಯಗಳನ್ನು ಸೋನಿ ಸಿಕ್ಸ್ ಚಾನಲ್ ಭಾರತದಲ್ಲಿ ನೇರಪ್ರಸಾರ ಮಾಡಲಿದೆ. ಎಲ್‌ಪಿಎಲ್ ಪಂದ್ಯಗಳನ್ನು ಭಾರತ, ಶ್ರೀಲಂಕಾ ಮಾತ್ರವಲ್ಲದೆ ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ, ಭೂತಾನ್ ಮತ್ತು ಮಾಲ್ಡೀವ್ಸ್‌ಗಳಲ್ಲಿ ನೇರಪ್ರಸಾರ ಮಾಡುವ ಹಕ್ಕನ್ನು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ ಪಡೆದುಕೊಂಡಿದೆ.

ಲಂಕಾ ಪ್ರೀಮಿಯರ್ ಲೀಗ್ ನವೆಂಬರ್ 26ರಿಂದ ಡಿಸೆಂಬರ್ 16ರವರೆಗೆ ನಡೆಯಲಿದ್ದು, ಹಂಬತೋಟಾದ ಮಹೀಂದ್ರ ರಾಜಪಕ್ಷೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. 5 ತಂಡಗಳ ಲೀಗ್‌ನಲ್ಲಿ ಭಾರತದ ಕೆಲವು ಮಾಜಿ ಆಟಗಾರರು ಕೂಡ ಆಡಲಿದ್ದಾರೆ. ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟಿಗರೂ ಟೂರ್ನಿಯಲ್ಲಿ ಆಡಲಿದ್ದಾರೆ.

ಕೊಲಂಬೊ ಕಿಂಗ್ಸ್ ಮತ್ತು ಕ್ಯಾಂಡಿ ಟಸ್ಕರ್ಸ್‌ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಐಪಿಎಲ್‌ನಂತೆ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7.30ರಿಂದ ಪಂದ್ಯ ನಡೆಯಲಿದೆ. 2 ಪಂದ್ಯಗಳಿರುವ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಗಾಲೆ ಗ್ಲಾಡಿಯೇಟರ್ಸ್‌, ಜಾಫ್ನಾ ಸ್ಟೇಲಿಯನ್ಸ್ ಮತ್ತು ಡಂಬುಲಾ ಹ್ವಾಕ್ಸ್ ಟೂರ್ನಿಯಲ್ಲಿ ಆಡಲಿರುವ ಇತರ 3 ತಂಡಗಳು.