ಕ್ರೀಡೆ

'ಆರ್​​ಸಿಬಿ ಪರ ಆಡೋಕೆ ಇಷ್ಟವಿರಲಿಲ್ಲ, ಬೆದರಿಸಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡ್ರು'

ಬೆಂಗಳೂರು : ನನಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದು ಇಷ್ಟವಿರಲಿಲ್ಲ. ನನಗೆ ತಿಳಿಯದೆ ಆರ್​ಸಿಬಿ ಜೊತೆಗಿನ ಒಪ್ಪಂದದ ಪತ್ರಕ್ಕೆ ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಸಹಿ ಹಾಕಿಸಿಕೊಂಡಿದ್ದರು. ಕೇಳಿದ್ದಕ್ಕೆ ನನ್ನ ವೃತ್ತಿ ಜೀವನವನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಪ್ರವೀಣ್ ಕುಮಾರ್​​ ಗಂಭೀರ ಆರೋಪ ಮಾಡಿದ್ದಾರೆ.

ಐಪಿಎಲ್​ನ ಅಂದಿನ ಅಧ್ಯಕ್ಷ ಲಲಿತ್ ಮೋದಿ ಆರ್​ಸಿಬಿ ಪರ ಆಡದಿದ್ದರೆ ನಿನ್ನ ವೃತ್ತಿಜೀವನನ್ನೇ ಕೊನೆಗೊಳಿಸುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2008 ರ ಚೊಚ್ಚಲ ಐಪಿಎಲ್​ನಲ್ಲಿ ಪ್ರವೀಣ್ ಕುಮಾರ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅಂದು ತಾನು ಆರ್​ಸಿಬಿ ತಂಡದ ಪರ ಕಣಕ್ಕಿಳಿಯಲು ಇಷ್ಟಪಟ್ಟಿರಲಿಲ್ಲ. ನನ್ನ ಮೊದಲ ಆಯ್ಕೆ ಡೆಲ್ಲಿ ಡೇರ್​ ಡೆವಿಲ್ಸ್​ ತಂಡವಾಗಿತ್ತು. ನನಗೆ ಬೆದರಿಕೆಯೊಡ್ಡಿ ಆರ್​ಸಿಬಿ ಪರ ಕಣಕ್ಕಿಳಿಯುವಂತೆ ಮಾಡಿದ್ದರು ಎಂದು ಪ್ರವೀಣ್​ ಕುಮಾರ್ ಆರೋಪ ಮಾಡಿದ್ದಾರೆ.

ಬೆಂಗಳೂರು ನನ್ನ ಊರಿನಿಂದ ಸಾಕಷ್ಟು ದೂರಲ್ಲಿತ್ತು. ಅಲ್ಲಿನ ಆಹಾರ ಕೂಡ ನನಗೆ ಇಷ್ಟವಾಗುತ್ತಿರಲಿಲ್ಲ. ಇದೇ ವೇಳೆ ದೆಹಲಿ ನನ್ನ ಊರಾದ ಮೀರತ್​ಗೆ ತುಂಬಾ ಹತ್ತಿರದಲ್ಲಿತ್ತು. ಮನೆಗೆ ಹೋಗಲು ಸಹಾ ಅನುಕೂಲವಾಗುತ್ತಿತ್ತು. ಹೀಗಾಗಿ ನಾನು ಆರ್​ಸಿಬಿ ಪರ ಆಡುವುದಿಲ್ಲ ಎಂದು ತಿಳಿಸಿದ್ದೆ ಎಂದಿದ್ದಾರೆ.

ಅನಾಮಿಕ ವ್ಯಕ್ತಿಯೊಬ್ಬರು ನನ್ನಿಂದ ಪೇಪರ್​ ಒಂದಕ್ಕೆ ಸಹಿ ಹಾಕಿಸಿಕೊಂಡಿದ್ದರು.

ಇದು ಆರ್​​ಸಿಬಿ ಜೊತೆಗಿನ ಒಪ್ಪಂದ ಪತ್ರವೆಂದು ಸಹಿ ಹಾಕಿದ ಬಳಿಕವಷ್ಟೇ ನನಗೆ ತಿಳಿಯುತು. ಏಕೆಂದರೆ ನನಗೆ ಇಂಗ್ಲಿಷ್ ಓದಲು ಬರುತ್ತಿರಲಿಲ್ಲ. ಆದರೂ ನಾನು ಡೆಲ್ಲಿ ತಂಡದ ಪರ ಆಡುತ್ತೇನೆ ಎಂದು ತಿಳಿಸಿದ್ದೆ.

ಆರ್​ಸಿಬಿ ಪರ 3 ಸೀಸನ್​ಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್ 47 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 41 ವಿಕೆಟ್​ಗಳನ್ನು ಕಬಳಿಸಿದ್ದಾರೆ. 2010 ರಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಪ್ರವೀಣ್​ ಕುಮಾರ್ ಅವರ ಈ ಗಂಭೀರ ಹೇಳಿಕೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.