ಕ್ರೀಡೆ

"ಈಕೆಗ್ಯಾಕೆ ಕೋಪ? ನನಗಂತು ಅರ್ಥವಾಗ್ತಿಲ್ಲ": ಕ್ರಿಕೆಟಿಗ ಶ್ರೀಶಾಂತ್​ ಪತ್ನಿ ಛೀಮಾರಿಗೆ ಲಲಿತ್​ ಮೋದಿ ತಿರುಗೇಟು | Lalit Modi

Lalit Modi: ಇತ್ತೀಚೆಗೆಷ್ಟೇ, ಲಲಿತ್ ಮೋದಿ ಮತ್ತು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್, 2008ರ ಮೊದಲ ಐಪಿಎಲ್​ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್, ಕ್ರಿಕೆಟಿಗ ಶ್ರೀಶಾಂತ್​ಗೆ ಕಪಾಳಮೋಕ್ಷ ಮಾಡಿದ ಘಟನೆ ಬಗ್ಗೆ ಪ್ರಸ್ತಾಪಿಸಿದ್ದಲ್ಲದೇ, ಘಟನೆಯ ವಿಡಿಯೋ ತುಣುಕನ್ನು ಜಾಲತಾಣಗಳಲ್ಲಿ ಹರಿಬಿಟ್ಟರು. ಇದನ್ನು ಖಂಡಿಸಿದ ಶ್ರೀಶಾಂತ್​ ಪತ್ನಿ, ಲಲಿತ್ ಮತ್ತು ಕ್ಲಾರ್ಕ್​ ವಿರುದ್ಧ ತೀವ್ರ ಕಿಡಿಕಾರಿದರು. ಈ ವಿಚಾರವನ್ನು ಇದೀಗ ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಲಲಿತ್, ಭುವನೇಶ್ವರಿ ಹಾಕಿದ ಛೀಮಾರಿಗೆ ತಿರುಗೇಟು ನೀಡಿದ್ದಾರೆ.

ಲಲಿತ್​ ತಿರುಗೇಟು

"ಇಲ್ಲಿ ನನಗೆ ಅರ್ಥವಾಗ್ತಿಲ್ಲ. ಆಕೆ ಏಕೆ ಕೋಪಗೊಂಡಿದ್ದಾರೆ ಅಂತ? ಈ ಬಗ್ಗೆ ನನ್ನನ್ನು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿರುವೆ ಅಷ್ಟೇ. ಅಷ್ಟಕ್ಕೂ, ನಾನು ಸತ್ಯ ಹೇಳಿದ್ದೇನೆ ಅಲ್ಲಿ. ಆ ಸಂದರ್ಭದಲ್ಲಿ, ಶ್ರೀಶಾಂತ್​ ಸಂತ್ರಸ್ತ. ಪಾಪ ಆತನಿಗೆ ನೋವಾಗಿತ್ತು. ಇದೇ ಕಾರಣಕ್ಕೆ, ಆ ವಿಚಾರವನ್ನು ಮಾತನಾಡಿದೆ. ಇಲ್ಲಿಯವರೆಗೆ ಯಾರು ಆ ವಿಚಾರದ ಬಗ್ಗೆ ನನ್ನನ್ನು ಕೇಳಿರಲಿಲ್ಲ. ಆದರೆ, ಮೈಕಲ್​ ಅದನ್ನು ಪ್ರಶ್ನಿಸಿದರು. ಅದಕ್ಕಷ್ಟೇ ಉತ್ತರಿಸಿದ್ದೇನೆ" ಎಂದು ಲಲಿತ್​ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶ್ರೀಶಾಂತ್ ಪತ್ನಿ ದೂರಿದ್ದೇನು?

"ಲಲಿತ್ ಮೋದಿ ಮತ್ತು ಮೈಕಲ್ ಕ್ಲಾರ್ಕ್​ ನಿಮ್ಮಿಬ್ಬರಿಗೂ ನಾಚಿಕೆಯಾಗಬೇಕು. ನಿಮ್ಮ ಸೋಷಿಯಲ್ ಮೀಡಿಯಾ ಪ್ರಚಾರಕ್ಕೆ, ಲೈಕ್​ಗಳಿಗೆ 2008ರಲ್ಲೇ ಮುಗಿದು ಹೋದ ಘಟನೆಯನ್ನು ಮತ್ತೆ ಎಳೆದು ತಂದಿದ್ದೀರಾ. ನಿಜಕ್ಕೂ ನೀವು ಮನುಷ್ಯರೇ ಅಲ್ಲ. ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್​ ಇಬ್ಬರೂ ಈ ಘಟನೆಯನ್ನು ಮರೆತು ತಮ್ಮ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. ಶಾಲೆಗೆ ಹೋಗುವ ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನೀವು ಮಾಡಿರುವುದು ತೀರ ಅಸಹ್ಯಕರ, ಹೃದಯಕ್ಕೆ ಘಾಸಿ ಉಂಟುಮಾಡಿದ ಮತ್ತು ಅಮಾನವೀಯ" ಎಂದು ಭುವನೇಶ್ವರಿ ಅಸಮಾಧಾನ ಹೊರಹಾಕಿದರು.

ಕುಟುಂಬಕ್ಕೆ ನೋವುಂಟು ಮಾಡಿದೆ!

"ನೀವು ಹರಿಬಿಟ್ಟ 18 ವರ್ಷಗಳ ಹಳೆಯ ವಿಡಿಯೋ ನಮ್ಮ ಕುಟುಂಬಕ್ಕೆ ನೋವು ತಂದಿದೆ. ಇದು ನಮ್ಮ ಕುಟುಂಬಸ್ಥರ ಮೇಲೆ ತೀವ್ರ ಪರಿಣಾಮ ಬೀರಿದೆ. ಶ್ರೀಶಾಂತ್​ ಪತ್ನಿಯಾಗಿ ಮತ್ತು ಅವರ ಮಕ್ಕಳ ತಾಯಿಯಾಗಿ, ಯಾವಾಗಲೋ ಮುಗಿದು ಹೋದ ಕಥೆಯನ್ನು ಮತ್ತೆ ಕೆದಕಿದ್ದನ್ನು ನೋಡಲು ತುಂಬಾ ಕಷ್ಟವಾಗಿದೆ. ದಶಕಗಳ ಹಿಂದೆಯೇ ಸಮಾಧಿಯಾದ ವಿಚಾರವನ್ನು ಮುಂದಿಟ್ಟು, ನಮಗೆ ನೋವುಂಟು ಮಾಡಲಾಗಿದೆ. ತಮ್ಮದಲ್ಲದ ತಪ್ಪಿಗೆ ಪ್ರಶ್ನೆಗಳು ಮತ್ತು ಅವಮಾನವನ್ನು ಎದುರಿಸಬೇಕಾಗಿದೆ" ಎಂದು ಶ್ರೀಶಾಂತ್ ಪತ್ನಿ ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).