ಕ್ರೀಡೆ

VIDEO | 99 ರನ್‌ಗೆ ಔಟಾದ ಸಿಟ್ಟಿಗೆ ಬ್ಯಾಟ್ ಎಸೆದ ಕ್ರಿಸ್ ಗೇಲ್!

ಅಬುಧಾಬಿ: ರಾಜಸ್ಥಾನ ರಾಯಲ್ಸ್ ವಿರುದ್ಧದ ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಕ್ರಿಸ್ ಗೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿದರು. 63 ಎಸೆತಗಳ ಅಮೋಘ ಇನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿದ ಗೇಲ್ ಕೇವಲ 1 ರನ್‌ನಿಂದ ಶತಕವಂಚಿತರಾದರು. 99 ರನ್ ಗಳಿಸಿ ಜ್ರೋಾ ಆರ್ಚರ್ ಎಸೆತದಲ್ಲಿ ಬೌಲ್ಡ್ ಆದ ಬೆನ್ನಲ್ಲೇ ಗೇಲ್ ತಮ್ಮ ಬ್ಯಾಟ್ ಅನ್ನು ದೂರಕ್ಕೆ ಎಸೆದು ಸಿಟ್ಟು ಮತ್ತು ನಿರಾಸೆಯನ್ನು ಹೊರಹಾಕಿದರು.

ಇನಿಂಗ್ಸ್‌ನ ಅಂತಿಮ ಓವರ್ ಆರಂಭದ ವೇಳೆ 92 ರನ್ ಗಳಿಸಿದ್ದ ಗೇಲ್ ಮೊದಲ ಎಸೆತದಲ್ಲಿ ಸಿಂಗಲ್ಸ್ ಕಸಿದರು. ಆರ್ಚರ್ ಎಸೆದ ಓವರ್‌ನ 2ನೇ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಮತ್ತೊಂದು ಸಿಂಗಲ್ಸ್ ತೆಗೆದರು. ಬಳಿಕ 3ನೇ ಎಸೆತವನ್ನು ಸಿಕ್ಸರ್‌ಗಟ್ಟಿದ ಗೇಲ್, 4ನೇ ಎಸೆತದಲ್ಲಿ ಸಿಂಗಲ್ಸ್ ಕದಿಯಲು ಯತ್ನಿಸಿ ಬೌಲ್ಡ್ ಆದರು. ಇದರಿಂದ ಪ್ರಸಕ್ತ ಐಪಿಎಲ್‌ನ ಚೊಚ್ಚಲ ಹಾಗೂ ಒಟ್ಟಾರೆ 7ನೇ ಶತಕ ಪೂರೈಸಲು ವಿಫಲರಾದರು. ಆಗ ಮೈದಾನದಲ್ಲೇ ಬ್ಯಾಟ್ ಎಸೆದು ನಿರಾಸೆ ವ್ಯಕ್ತಪಡಿಸಿದರು.

ಬೌಲ್ಡ್ ಆದ ಬೆನ್ನಲ್ಲೇ ಮೈದಾನಕ್ಕೆ ಒದ್ದ ಗೇಲ್ ಅವರು ಎಸೆದ ಬ್ಯಾಟ್ ಮಿಡ್‌ವಿಕೆಟ್‌ನತ್ತ ಹೋಗಿ ಬಿದ್ದಿತು. ಬಳಿಕ ಬ್ಯಾಟ್ ಹೆಕ್ಕಿಕೊಳ್ಳಲು ಹೋಗುವ ಮುನ್ನ ಬೌಲರ್ ಆರ್ಚರ್‌ಗೆ ಹಸ್ತಲಾಘವವನ್ನೂ ನೀಡಿದರು. ಬಳಿಕ ಬ್ಯಾಟ್ ಮೇಲೆ ತಮ್ಮ ಹೆಲ್ಮೆಟ್ ಇಟ್ಟುಕೊಂಡು ಅವರು ಡಗೌಟ್‌ನತ್ತ ಹೆಜ್ಜೆ ಹಾಕಿದರು. ಅವರು ಐಪಿಎಲ್‌ನಲ್ಲಿ 2 ಬಾರಿ 99 ರನ್ ಗಳಿಸಿದ ಏಕೈಕ ಆಟಗಾರರೆನಿಸಿದರು. ಕಳೆದ ವರ್ಷ ಅವರು ಆರ್‌ಸಿಬಿ ವಿರುದ್ಧ 99 ರನ್‌ನೊಂದಿಗೆ ಅಜೇಯರಾಗಿದ್ದರು. ಟಿ20 ಕ್ರಿಕೆಟ್‌ನಲ್ಲಿ 22 ಶತಕ ಸಿಡಿಸಿರುವ ಅವರು 99 ರನ್‌ಗೆ ಔಟಾಗಿದ್ದು ಇದೇ ಮೊದಲಾಗಿದೆ.

ಬ್ಯಾಟ್ ಬಿಸಾಕಿದ್ದಕ್ಕೆ ಗೇಲ್‌ಗೆ ದಂಡ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 99 ರನ್‌ಗೆ ಬೌಲ್ಡ್ ಆದ ಬಳಿಕ ಸಿಟ್ಟಿನಿಂದ ಬ್ಯಾಟ್ ಎಸೆದ ಅಶಿಸ್ತಿನ ವರ್ತನೆಗಾಗಿ ಪಂದ್ಯ ಸಂಭಾವನೆಯ ಶೇ. 10ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ಆಯೋಜಕರು ಹೊರಡಿಸಿರುವ ಪ್ರಕಟಣೆಯಲ್ಲಿ ಯಾವ ತಪ್ಪಿಗಾಗಿ ದಂಡ ವಿಧಿಸಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಅವರು ಬ್ಯಾಟ್ ಎಸೆದಿದ್ದಕ್ಕೆ ಈ ಶಿಕ್ಷೆ ವಿಧಿಸಿರುವುದು ಖಚಿತವೆನಿಸಿದೆ.