ಕ್ರೀಡೆ

ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದವ ಅರೆಸ್ಟ್​; 16 ವರ್ಷದ ಹಳ್ಳಿ ಹುಡುಗ ಜೈಲಿಗೆ

ಈ ಬಾರಿಯ ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ ಚೆನ್ನಾಗಿ ಆಡುತ್ತಿಲ್ಲ ಎಂಬ ಕಾರಣಕ್ಕೆ ಅವರ ಮಗಳು ಝಿವಾಳಿಗೆ ಇನ್ಸ್ಟಾಗ್ರಾಂನಲ್ಲಿ ಕಿರಾತಕನೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದ. ಅವನ ಕಾಮೆಂಟ್​ ನೋಡಿದ ನೆಟ್ಟಿಗರು, ಕೆಲವು ಗಣ್ಯರು ಹಿಗ್ಗಾಮುಗ್ಗಾ ಜಾಡಿಸಿದ್ದರು. ಅಷ್ಟೇಅಲ್ಲ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.

ಇದೀಗ ಪೊಲೀಸರು ಝಿವಾಳಿಗೆ ರೇಪ್​ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರುಳ ಗುಜರಾತ್​ನ ಕಚ್​ ಜಿಲ್ಲೆಯವನಾಗಿದ್ದು, ಝಾರ್ಖಂಡದ ರಾಂಚಿಯಲ್ಲಿರುವ ರಾತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸಕ್ತ ಐಪಿಎಲ್​​ನಲ್ಲಿ ಧೋನಿ ಬಳಗ ಸೋಲುತ್ತಿದೆ. ಎಂ.ಎಸ್​.ಧೋನಿ ಕೂಡ ಉತ್ತಮವಾಗಿ ಆಡುತ್ತಿಲ್ಲ. ಬುಧವಾರ ಕೋಲ್ಕತ್ತ ನೈಟ್​ ರೈಡರ್ಸ್​ ವಿರುದ್ಧ ಸಿಎಸ್​ಕೆ ಸೋಲುಂಡ ಬಳಿಕ ಈ ವ್ಯಕ್ತಿ, ಧೋನಿ ಪತ್ನಿ ಸಾಕ್ಷಿಯವರ ಇನ್ಸ್ಟಾ ಅಕೌಂಟ್​​ನಲ್ಲಿ, ನಿಮ್ಮ ಮಗಳನ್ನು ಅತ್ಯಾಚಾರ ಮಾಡುವುದಾಗಿ ಕಾಮೆಂಟ್​ ಹಾಕಿದ್ದ. ಬೆದರಿಕೆಯ ಹಿನ್ನೆಲೆಯಲ್ಲಿ ರಾಂಚಿಯ ಸಿಮ್ಲಿಯಾದಲ್ಲಿರುವ ಧೋನಿ ಫಾರ್ಮ್ ಹೌಸ್​ನಲ್ಲಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿತ್ತು.

ಬಂಧಿತ ವ್ಯಕ್ತಿಗೆ ಇನ್ನೂ 16 ವರ್ಷ. ಕಚ್​​ನ ಮುಂಡ್ರಾದಲ್ಲಿರುವ ನಾಮ್ನಾ ಕಪಾಯ ಗ್ರಾಮದ ನಿವಾಸಿಯಾಗಿದ್ದಾನೆ. ತಾನು ಬೆದರಿಕೆ ಕಾಮೆಂಟ್​ ಹಾಕಿದ್ದನ್ನು ಇವನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)