ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮಂಗಳವಾರ ನಡೆದ ಡಿವೈ ಪಾಟೀಲ್ ಟಿ20 ಕಪ್ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿರುವ ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯರನ್ನು ಭಾವಿ ಪತ್ನಿ ನತಾಶಾ ಸ್ಟಾಂಕೋವಿಕ್ ಕೊಂಡಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪಾಂಡ್ಯ ಅವರ ಫೋಟೋ ಅಪ್ಲೋಡ್ ಮಾಡಿ "ಕುಂಗ್ ಫೂ ಪಾಂಡ್ಯ" ಎಂದು ಪಾಂಡ್ಯಗೆ ಹೊರ ನಾಮಕರಣ ಮಾಡಿದ್ದಾರೆ. ಈ ಮೂಲಕ ತಮ್ಮ ಭಾವಿ ಪತಿಯನ್ನು ನತಾಶಾ ಮೆಚ್ಚಿಕೊಂಡಿದ್ದಾರೆ.
ಅಂದಹಾಗೆ ಡಿವೈ ಪಾಟೀಲ್ ಟಿ20 ಕಪ್ ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರವಾಗಿ ಆಡಿದ ಹಾರ್ದಿಕ್ ಪಾಂಡ್ಯ ಸಿಎಜಿ ತಂಡದ ವಿರುದ್ಧ 7 ಬೌಂಡರಿ, 10 ಸಿಕ್ಸರ್ ನೆರವಿನಿಂದ 39 ಎಸೆತಗಳಲ್ಲಿ ಬರೋಬ್ಬರಿ 105 ರನ್ ಸಿಡಿಸಿದರು.
ಕೇವಲ 37ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಶತಕ ಪೂರೈಸಿದ್ದರು. ವಿ. ಜೀವರಾಜನ್ ಓವರ್ನಲ್ಲಿ 26 ರನ್ ಚಚ್ಚಿದ ಪಾಂಡ್ಯ, ರಿಲಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 252 ರನ್ ಪೇರಿಸಲು ನೆರವಾದರು.
ವೈಯಕ್ತಿಕ ವಿಚಾರಕ್ಕೆ ಬಂದರೆ, ಇದೇ ವರ್ಷದ ಆರಂಭದಲ್ಲಿ ಅಂದರೆ ಜನವರಿ ಒಂದರಂದು ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ರೊಂದಿಗೆ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ಎಂಗೇಜ್ಡ್’ ಎಂದು ಬರೆದ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದರು. (ಏಜೆನ್ಸೀಸ್)