ಕ್ರೀಡೆ

ವಿಶ್ವ ಗೆದ್ದ ವೀರ ವನಿತೆಯರಿಗೆ ಬಹುಪರಾಕ್​; ಇದು ಬರೀ ಗೆಲುವಲ್ಲ, ಮಹಿಳಾ ಕ್ರಿಕೆಟ್​ ಕ್ರಾಂತಿ!

ಬೆಂಗಳೂರು: ವಿಶ್ವಕಪ್​ ಜಯಿಸುವ ಕನಸನ್ನು ಭಾರತದ ಆಟಗಾರ್ತಿಯರು ಕಳೆದ 5 ದಶಕದಿಂದಲೂ ಕಾಣುತ್ತ ಬಂದಿದ್ದರು. ಅದು ಭಾನುವಾರ ನನಸಾಯಿತು. ಒಂದೊಂದೇ ಮೆಟ್ಟಿಲು ಏರುತ್ತ ಕೊನೆಗೂ ಈ ದಿನವನ್ನು ಕಾಣುವಲ್ಲಿ ಹಲವು ಆಟಗಾರ್ತಿಯರ ಕೊಡುಗೆ ಇದೆ. ಹಂತ ಹಂತವಾಗಿ ಬೆಳೆಯುತ್ತ ಬಂದ ಮಹಿಳಾ ತಂಡ ಇದೀಗ ತವರಿನಲ್ಲೇ ವಿಶ್ವಕಪ್​ ಗೆದ್ದು ಬೀಗಿದೆ. ಇದರಲ್ಲಿ ಪ್ರಮುಖವಾಗಿ 16 ಆಟಗಾರ್ತಿಯರ ಪರಿಶ್ರಮವಿದೆ. ಅವರ ಸಾಧನೆಯ ಹಾದಿ, ಕೊಡುಗೆಗಳ ಸಂಪ್ತ ಮೆಲುಕು ಇಲ್ಲಿದೆ.

ಹರ್ಮಾನ್​ಪ್ರೀತ್​ ಅನುಭವದ ಬಲ

ತಂಡದ ಅತಿ ಹಿರಿಯ ಆಟಗಾರ್ತಿ ಹಾಗೂ ನಾಯಕಿ ಹರ್ಮಾನ್​ಪ್ರೀತ್​ ಕೌರ್​, ತಾನಾಡಿದ 13ನೇ ವಿಶ್ವಕಪ್​ನಲ್ಲಿ (5 ಏಕದಿನ, 8 ಟಿ20) ಕೊನೆಗೂ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಪಡೆದರು. ಪಂಜಾಬ್​ನ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಅವರು, 2009ರಿಂದಲೂ ಭಾರತ ತಂಡದ ಭಾಗವಾಗಿದ್ದಾರೆ. 2022ರಿಂದ ನಾಯಕಿಯಾಗಿರುವ ಅವರು, ಡಬ್ಲ್ಯುಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಸಾರಥಿಯಾಗಿ 2 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ವಿಶ್ವಕಪ್​ನಲ್ಲಿ ಅವರ ಅನುಭವಿ ನಾಯಕತ್ವ ಮತ್ತು ಬಲಿಷ್ಠ ಆಸ್ಟ್ರೆಲಿಯಾ ವಿರುದ್ಧದ ಸೆಮಿಫೈನಲ್​ನಲ್ಲಿ ಆಡಿದ ನಿರ್ಣಾಯಕ ಆಟ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು. ಈ ಮೂಲಕ ಏಕದಿನ ವಿಶ್ವಕಪ್​ ಗೆದ್ದ ಭಾರತದ ನಾಯಕರಾದ ಕಪಿಲ್​ ದೇವ್​, ಎಂಎಸ್​ ಧೋನಿ ಸಾಲಿಗೆ ಸೇರಿದರು.

ಸ್ಮೃತಿ ಮಂದನಾ ಆಧಾರಸ್ತಂಭ

ಭಾರತೀಯ ಬ್ಯಾಟಿಂಗ್​ ವಿಭಾಗದ ಆಧಾರಸ್ತಂಭ ಮತ್ತು ಉಪನಾಯಕಿ ಸ್ಮ$ತಿ ಮಂದನಾ ವಿಶ್ವಕಪ್​ ಆವೃತ್ತಿಯೊಂದರಲ್ಲಿ ಸರ್ವಾಧಿಕ 434 ರನ್​ ಸಿಡಿಸಿದ ದಾಖಲೆ ಬರೆದರು. ಮುಂಬೈನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಅವರು, ಕ್ಲಬ್​ ಕ್ರಿಕೆಟಿಗರಾದ ತಂದೆ ಮತ್ತು ಅಣ್ಣನ ಸ್ಫೂರ್ತಿಯಿಂದ ಕ್ರಿಕೆಟ್​ ಆಡಲಾರಂಭಿಸಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕರ ಬ್ಯಾಟಿಂಗ್​ನಿಂದ ಆಕರ್ಷಿತರಾಗಿ ಎಡಗೈನಲ್ಲಿ ಆಡಲಾರಂಭಿಸಿದ್ದರು. ಲೀಗ್​ನಲ್ಲಿ ಸತತ 3 ಸೋಲಿನ ಬಳಿಕ ನಾಕೌಟ್​ ಕೈತಪ್ಪುವ ಭೀತಿ ಎದುರಾದಾಗ, ನ್ಯೂಜಿಲೆಂಡ್​ ವಿರುದ್ಧದ ಮಹತ್ವದ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆಸೀಸ್​, ಇಂಗ್ಲೆಂಡ್​ ಎದುರು ಲೀಗ್​ನಲ್ಲಿ 80 ಪ್ಲಸ್​ ರನ್​ ಬಾರಿಸಿದ್ದರು. ಫೈನಲ್​ನಲ್ಲಿ ಉಪಯುಕ್ತ 45 ರನ್​ ಗಳಿಸಿ, ಶತಕದ ಜತೆಯಾಟವನ್ನೂ ಆಡಿದ್ದರು.

ದೀಪ್ತಿ ದಿಟ್ಟತನದ ಆಟ

2011ರ ಏಕದಿನ ವಿಶ್ವಕಪ್​ ಗೆಲುವಿನಲ್ಲಿ ಯುವರಾಜ್​ ಸಿಂಗ್​ ಆಲ್ರೌಂಡ್​ ಆಟ ಪ್ರಮುಖ ಪಾತ್ರ ನಿರ್ವಹಿಸಿದಂತೆ, ಮಹಿಳೆಯರ ಜಯದಲ್ಲಿ ದೀಪ್ತಿ ಶರ್ಮ ಅವರ ಆಲ್ರೌಂಡ್​ ಆಟವೂ ಅಷ್ಟೇ ಮಹತ್ವದ್ದಾಗಿದೆ. ಉತ್ತರ ಪ್ರದೇಶದ ರೈಲ್ವೇಸ್​ ಉದ್ಯೋಗಿಯ ಪುತ್ರಿಯಾದ ಅವರಿಗೆ ಅಣ್ಣ ಸುಮಿತ್​ ಶರ್ಮ ಅವರೇ ಬಾಲ್ಯದ ಕೋಚ್​. 215 ರನ್​ ಮತ್ತು 22 ವಿಕೆಟ್​ ಕಬಳಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. 2014ರಲ್ಲಿ ಭಾರತ ತಂಡ ಪ್ರವೇಶಿಸಿದ್ದ ದೀಪ್ತಿ ಈಗ ತಂಡದ ಅನುಭವಿ ಆಟಗಾರ್ತಿಯರಲ್ಲಿ ಒಬ್ಬರು ಮತ್ತು ವಿಶ್ವಕಪ್​ನಲ್ಲಿ ಅವರ ಆಟವೂ ಅದಕ್ಕೆ ತಕ್ಕಂತೆಯೇ ಇತ್ತು. ಫೈನಲ್​ನಲ್ಲಿ ಅರ್ಧಶತಕ ಮತ್ತು 5 ವಿಕೆಟ್​ ಗೊಂಚಲು ಪಡೆದು ಹರಿಣಗಳನ್ನು ಕಾಡಿದರು.

ಜಾದು ಮಾಡಿದ ಜೆಮೀಮಾ ರೋಡ್ರಿಗಸ್​ 

ಕಳೆದ ಏಕದಿನ ವಿಶ್ವಕಪ್​ ಆಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದ ಜೆಮೀಮಾ ರೋಡ್ರಿಗಸ್​ ಈ ಬಾರಿಯ ಟೂರ್ನಿಯಲ್ಲೂ ಉತ್ತಮ ಆರಂಭ ಕಂಡಿರಲಿಲ್ಲ. ಮೊದಲ 3 ಪಂದ್ಯಗಳಲ್ಲಿ 2ರಲ್ಲಿ ಸೊನ್ನೆ ಸುತ್ತಿದ್ದರು. ಹೀಗಾಗಿ ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ 11ರ ಬಳಗದಿಂದಲೇ ಹೊರಬಿದ್ದಿದ್ದರು. ನಂತರ ನ್ಯೂಜಿಲೆಂಡ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಬಿರುಸಿನ 76 ರನ್​ ಸಿಡಿಸಿ ಬೃಹತ್​ ಮೊತ್ತಕ್ಕೆ ನೆರವಾದ ಅವರು, ಆಸೀಸ್​ ವಿರುದ್ಧದ ಸೆಮೀಸ್​ನಲ್ಲಿ ಅಜೇಯ 127 ರನ್​ ಬಾರಿಸಿ ಭಾರತ ಫೈನಲ್​ಗೇರುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದರು. ಮಂಗಳೂರು ಮೂಲದ ಇವರಿಗೆ ತಂದೆ ಐವಾನ್​ ಅವರೇ ಬಾಲ್ಯದ ಕೋಚ್​. ಶಾಲಾ ದಿನಗಳಲ್ಲಿ ಹಾಕಿ ಆಟಗಾರ್ತಿಯೂ ಆಗಿದ್ದರು. ಮುಂಬೈ ಪರ ಏಕದಿನ ಪಂದ್ಯದಲ್ಲಿ 17ನೇ ವಯಸ್ಸಿನಲ್ಲೇ ದ್ವಿಶತಕ ಸಿಡಿಸಿದ ಬಳಿಕ ಸಂಪೂರ್ಣವಾಗಿ ಕ್ರಿಕೆಟ್​ನತ್ತ ಗಮನಹಿಸಿದ್ದರು.

ಶೆಫಾಲಿ ವರ್ಮ ಫೈನಲ್​ ಶೋ

ಫೈನಲ್​ ಆಡುವುದಕ್ಕೆ 6 ದಿನ ಮುನ್ನ ಶೆಫಾಲಿ ವರ್ಮ ವಿಶ್ವಕಪ್​ನಲ್ಲಿ ಭಾರತ ತಂಡದ ಭಾಗವೇ ಆಗಿರಲಿಲ್ಲ. ಆದರೆ ಪ್ರತಿಕಾ ರಾವಲ್​ ಗಾಯಗೊಂಡು ಹೊರಬಿದ್ದಾಗ ಶೆಫಾಲಿ ತುರ್ತಾಗಿ ತಂಡ ಸೇರಿದ್ದರು. ಸೆಮೀಸ್​ನಲ್ಲಿ ಆಸೀಸ್​ ಎದುರು ಬೇಗನೆ ಔಟಾದಾಗ ಈಕೆ ಬೇಕಿತ್ತಾ? ತಂಡದಲ್ಲೇ ಇದ್ದ ಹರ್ಲೀನ್​ರಿಂದಲೇ ಇನಿಂಗ್ಸ್​ ಆರಂಭಿಸಬಹುದಿತ್ತಲ್ಲ ಎಂಬ ಟೀಕೆಗಳೂ ಕೇಳಿಬಂದಿದ್ದವು. ಆದರೆ ಫೈನಲ್​ನಲ್ಲಿ ತನ್ನ ಮಹತ್ವವನ್ನು ಸಾರಿ ಗೆಲುವಿನ ರೂವಾರಿಯಾಗಿ ಮೂಡಿಬಂದರು. ಬಿರುಸಿನ 87 ರನ್​ ಸಿಡಿಸುವ ಜತೆಗೆ ಬೌಲಿಂಗ್​ನಲ್ಲೂ 2 ಪ್ರಮುಖ ವಿಕೆಟ್​ ಕಬಳಿಸಿ ಮಿಂಚಿದರು. ಹರಿಯಾಣದ ರೋಹ್ಟಕ್​ನವರಾದ ಶೆಫಾಲಿ, ಕಟ್ಟಾ ಕ್ರಿಕೆಟ್​ ಪ್ರೇಮಿಯಾದ ತಂದೆ ಸಂಜೀವ್​ ವರ್ಮ ಪ್ರೇರಣೆಯಿಂದ ಕ್ರಿಕೆಟಿಗರಾಗಿದ್ದರು. ಬಿರುಸಿನ ಆಟಕ್ಕಾಗಿ "ಲೇಡಿ ಸೆಹ್ವಾಗ್​' ಎಂಬ ಹೆಸರು ಪಡೆದಿದ್ದ ಅವರು, 2023ರಲ್ಲಿ 19 ವಯೋಮಿತಿ ವಿಶ್ವಕಪ್​ ಗೆದ್ದ ಭಾರತ ತಂಡದ ನಾಯಕಿಯೂ ಆಗಿದ್ದರು.

ಸಂಘಟಿತ ಪರಾಕ್ರಮ

ಬಿಸಿಸಿಐ ಲೆವೆಲ್​-3 ಅಂಪೈರ್​ ಪ್ರದಿಪ್​ ರಾವಲ್​ ಪುತ್ರಿ ಪ್ರತಿಕಾ ರಾವಲ್​ ಕೊನೇ ಲೀಗ್​ ಪಂದ್ಯದಲ್ಲಿ ಗಾಯಗೊಂಡು ಹೊರಬೀಳುವುದಕ್ಕೆ ಮುನ್ನ ನ್ಯೂಜಿಲೆಂಡ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಒಟ್ಟು 308 ರನ್​ ಸಿಡಿಸಿ ಟೂರ್ನಿಯಲ್ಲಿ ಭಾರತದ 2ನೇ ಗರಿಷ್ಠ ರನ್​ ಎನಿಸಿದರು. ಬಂಗಾಳದ ರಿಚಾ ಘೋಷ್​ ವಿಕೆಟ್​ ಕೀಪಿಂಗ್​ ಜತೆಗೆ ಬಿರುಸಿನ ಬ್ಯಾಟಿಂಗ್​ ಮೂಲಕ 235 ರನ್​ ಬಾರಿಸಿ ಮಿಂಚಿದರು. ಇದರಲ್ಲಿ ಟೂರ್ನಿಯ ಗರಿಷ್ಠ 12 ಸಿಕ್ಸರ್​ಗಳೂ ಸೇರಿದ್ದವು. ಪಂಜಾಬ್​ನ ಅಮನ್​ಜೋತ್​ ಕೌರ್​ (146 ರನ್​, 6 ವಿಕೆಟ್​) ಆಲ್ರೌಂಡ್​ ಆಟದ ಮೂಲಕ ಬಲ ತುಂಬಿದರೆ, ವೇಗಿಗಳಾದ ರೇಣುಕಾ ಸಿಂಗ್​ (3), ಕ್ರಾಂತಿ ಗೌಡ್​ (9) ಹೊಸ ಚೆಂಡಿನಲ್ಲಿ ಪ್ರಭಾವ ಬೀರಿದರು. ಶ್ರೀಚರಣಿ (14), ರಾಧಾ ಯಾದವ್​ (4), ಸ್ನೇಹಾ ರಾಣಾ (7) ಸ್ಪಿನ್​ ಬೌಲಿಂಗ್​ನಲ್ಲಿ ದೀಪ್ತಿಗೆ ಸಾಥ್​ ನೀಡಿದರು. ಹರ್ಲೀನ್​ ಡಿಯೋಲ್​ (169), ಉಮಾ ಛೇಟ್ರಿ, ಯಸ್ತಿಕಾ ಭಾಟಿಯಾ, ಅರುಂಧತಿ ರೆಡ್ಡಿ ವಿಶ್ವಕಪ್​ ವಿಜೇತ ತಂಡದ ಇತರ ಆಟಗಾರ್ತಿಯರು.

ಅಮೋಲ್​ ಅಮೂಲ್ಯ ಕೊಡುಗೆ

2023ರ ಅಕ್ಟೋಬರ್​ನಲ್ಲಿ ಭಾರತ ಮಹಿಳಾ ತಂಡದ ಕೋಚ್​ ಪಟ್ಟವೇರಿದ್ದ ಮುಂಬೈನ ಅಮೋಲ್​ ಮುಜುಮ್ದಾರ್​ ಸರಿಯಾಗಿ 2 ವರ್ಷಗಳ ಬಳಿಕ ವಿಶ್ವಕಪ್​ ವಿಜೇತರೆನಿಸಿದ್ದಾರೆ. ಕ್ರಿಕೆಟ್​ ವೃತ್ತೀಜಿವನದಲ್ಲಿ ರನ್​ಮಳೆ ಹರಿಸಿದ ನಡುವೆಯೂ ಎಂದೂ ಭಾರತವನ್ನು ಪ್ರತಿನಿಧಿಸುವ ಅದೃಷ್ಟ ಇವರಿಗೆ ಒಲಿದಿರಲಿಲ್ಲ. 1988ರಲ್ಲಿ ಶಾಲಾ ಕ್ರಿಕೆಟ್​ನಲ್ಲಿ ಸಚಿನ್​ ತೆಂಡುಲ್ಕರ್​-ವಿನೋದ್​ ಕಾಂಬ್ಳಿ 664 ರನ್​ ಜತೆಯಾಟವಾಡಿದಾಗ, ಮುಂದಿನ ಬ್ಯಾಟರ್​ ಆಗಿದ್ದ ಅಮೋಲ್​ 2 ದಿನ ಪೂರ್ತಿ ಪ್ಯಾಡ್​ ಕಟ್ಟಿಕೊಂಡು ಬ್ಯಾಟಿಂಗ್​ಗಾಗಿ ಕಾದಿದ್ದರು. 1993-94ರಲ್ಲಿ ರಣಜಿ ಟ್ರೋಫಿಯ ಪದಾರ್ಪಣೆ ಪಂದ್ಯದಲ್ಲಿ 260 ರನ್​ ಸಿಡಿಸಿ "ನ್ಯೂ ತೆಂಡುಲ್ಕರ್​' ಎಂಬ ಹೊಗಳಿಕೆ ಪಡೆದಿದ್ದರು. ಆದರೆ ನಂತರ 2 ದಶಕಗಳ ಕಾಲ ದೇಶೀಯ ಕ್ರಿಕೆಟ್​ನಲ್ಲಿ ಆಡಿ 30 ಶತಕಗಳ ಸಹಿತ 11 ಸಾವಿರಕ್ಕೂ ಅಧಿಕ ರನ್​ ಗಳಿಸಿದ್ದರೂ, ಭಾರತ ಪರ ಆಡುವ ಅವಕಾಶ ಒಲಿದಿರಲಿಲ್ಲ. ಇದೀಗ ಆಟಗಾರ ಆಗಿ ಸಾಧ್ಯವಾಗದ್ದನ್ನು ಕೋಚ್​ ಆಗಿ ಸಾಧಿಸುವ ಮೂಲಕ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದ್ದಾರೆ.

ರಾಜ್ಯ ಸರ್ಕಾರ ಬಹುಮಾನ

ಐಸಿಸಿ, ಬಿಸಿಸಿಐ ಬಹುಮಾನದ ಜತೆಗೆ ಆಟಗಾರ್ತಿಯರಿಗೆ ತವರು ರಾಜ್ಯ ಸರ್ಕಾರದಿಂದಲೂ ಬಹುಮಾನಗಳು ಲಭಿಸಿವೆ. ರೇಣುಕಾ ಸಿಂಗ್​ಗೆ ಹಿಮಾಚಲ ಪ್ರದೇಶ ಸರ್ಕಾರ ಮತ್ತು ಕ್ರಾಂತಿ ಗೌಡ್​ಗೆ ಮಧ್ಯಪ್ರದೇಶ ಸರ್ಕಾರ ತಲಾ ಒಂದು ಕೋಟಿ ರೂ. ಬಹುಮಾನ ಪ್ರಕಟಿಸಿದೆ.

ಎಲ್ಲಕ್ಕಿಂತ ಮೇಲೆ ತ್ರಿವರ್ಣ!

ಸ್ಫೂರ್ತಿ ತುಂಬುವ ತಂಡ ಗೀತೆ ಆಸ್ಟ್ರೆಲಿಯಾ ಕ್ರಿಕೆಟ್​ ಸಂಸತಿ. ಭಾರತ ಪುರುಷರ ತಂಡ ಗೆದ್ದಾಗ ಸಾಮಾನ್ಯವಾಗಿ "ಚಕ್​ದೇ ಇಂಡಿಯಾ' ಹಾಡೇ ಮೊಳಗುತ್ತದೆ. ಇದೀಗ ಭಾರತ ಮಹಿಳಾ ಕ್ರಿಕೆಟ್​ ತಂಡದ ವಿಶ್ವಕಪ್​ ಗೆಲುವಿನಲ್ಲಿ ಅದರದೇ ಆದ ತಂಡ ಗೀತೆ ಸ್ಫೂರ್ತಿ ತುಂಬಿರುವುದು ವಿಶೇಷ. ಗೆಲುವಿನ ಬಳಿಕ ಪಿಚ್​ ಮಧ್ಯದಲ್ಲಿ ನಿಂತು ಹಾಡುವ ಮೂಲಕ ಈ ಗೀತೆಯನ್ನು ಬಹಿರಂಗಪಡಿಸಲಾಗಿದೆ. "ರಹೇಗಾ ಸಬ್​ಸೇ ಊಪರ್​, ಹಮಾರಾ ತಿರಂಗಾ! ಹಮ್​ ಹೈ ಟೀಮ್​ ಇಂಡಿಯಾ. ಹಮ್​ ಹೈ ಟೀಮ್​ ಇಂಡಿಯಾ' (ನಮ್ಮ ತ್ರಿವರ್ಣ ಎಲ್ಲಕ್ಕಿಂತ ಮೇಲೆ ಹಾರಾಡುತ್ತದೆ. ನಾವೇ ಭಾರತ ತಂಡ) ಎಂದು ಈ ಗೀತೆ ಸಾಗುತ್ತದೆ.