ಕ್ರೀಡೆ

ಬಿಆರ್ ಶರತ್ ಭರ್ಜರಿ ಶತಕ ಮಂಗಳೂರು ಡ್ಯ್ರಾಗನ್ಸ್‌ಗೆ ಜಯ: ಕರುಣ್ ನಾಯರ್ ಆಟ ವ್ಯರ್ಥ

ಬೆಂಗಳೂರು: ವಿಕೆಟ್ ಕೀಪರ್-ಬ್ಯಾಟರ್ ಬಿಆರ್ ಶರತ್ (111* ರನ್, 61 ಎಸೆತ, 9 ಬೌಂಡರಿ, 5 ಸಿಕ್ಸರ್) ಅಮೋಘ ಶತಕದ ಬ್ಯಾಟಿಂಗ್ ನೆರವಿನಿಂದ ಮಂಗಳೂರು ಡ್ಯ್ರಾಗನ್ಸ್ ತಂಡ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ಎದುರು 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಚಿನ್ನಸ್ವಾಮಿ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ತಂಡದ ನಾಯಕ ಕೆ.ಗೌತಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಾರಿಯರ್ಸ್‌ ತಂಡ ನಾಯಕ ಕರುಣ್ ನಾಯರ್ (77 ರನ್, 39 ಎಸೆತ, 9 ಬೌಂಡರಿ, 2 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮಂಗಳೂರು ಡ್ಯ್ರಾಗನ್ ತಂಡ ಬಿಆರ್ ಶರತ್ ಹಾಗೂ ರೋಹನ್ ಪಾಟೀಲ್ (54 ರನ್, 27 ಎಸೆತ, 5 ಬೌಂಡರಿ, 3 ಸಿಕ್ಸರ್) ಜತೆಯಾಟದ ಬಲದಿಂದ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 202 ರನ್ ದಾಖಲಿಸಿ ಟೂರ್ನಿಯಲ್ಲಿ ಮೊದಲ ಜಯದ ಸಂಭ್ರಮ ಕಂಡಿತು.

ಶರತ್ ಗೆಲುವಿನ ಶತಕ: ಎರಡನೇ ವಿಕೆಟ್‌ಗೆ ಜತೆಯಾದ ರೋಹನ್ ಪಾಟೀಲ್ ಹಾಗೂ ಬಿಆರ್ ಶರತ್ ತಂಡಕ್ಕೆ ಆಸರೆಯಾಗಿ ನಿಂತರು. ಮೈಸೂರು ಬೌಲರ್‌ಗಳ ಎದುರು ರನ್ ಮಳೆ ಹರಿಸಿದ ಇವರಿಬ್ಬರೂ ಮೊದಲ ಆರು ಓವರ್‌ಗಳಲ್ಲಿ 72 ರನ್ ಪೇರಿಸಿ ಬೃಹತ್ ಮೊತ್ತದ ಚೇಸಿಂಗ್‌ಗೆ ಬಲ ತುಂಬಿದರು. ಎರಡನೇ ವಿಕೆಟ್‌ಗೆ 52 ಎಸೆತಗಳಲ್ಲಿ 96 ರನ್ ಬಾರಿಸಿ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ರೋಹನ್ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ಶರತ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ವೇಗವಾಗಿ ರನ್ ಕಲೆಹಾಕಿದ ಶರತ್ 57 ಎಸೆತಗಳಲ್ಲಿ ಶತಕ ಪೂರೈಸಿದರು. ನಾಯಕ ಕೆ. ಗೌತಮ್ (5*) ಜತೆಗೂಡಿ ಇನ್ನೂ 7 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೈಸೂರು ವಾರಿಯರ್ಸ್‌: 5 ವಿಕೆಟ್‌ಗೆ 201 (ಆರ್. ಸಮರ್ಥ್ 14, ಕಾರ್ತಿಕ್ 29, ಕರುಣ್ 77, ರಾಹುಲ್ ರಾವತ್ 24, ತುಷಾರ್ 20, ಮನೋಜ್ 26*, ಕೆ. ಗೌತಮ್ 30ಕ್ಕೆ1, ಪ್ರತೀಕ್ 35ಕ್ಕೆ1).

ಮಂಗಳೂರು ಡ್ಯ್ರಾಗನ್: 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 202 (ಜಿ. ನವೀನ್ 6, ರೋಹನ್ 54, ಬಿಆರ್ ಶರತ್ 111*, ಅನೀಶ್ವರ್ 6, ಕೆವಿ ಸಿದ್ದಾರ್ಥ್ 14, ಅನಿರುದ್ಧ 2, ಕೆ. ಗೌತಮ್ 5*, ಎಂ. ವೆಂಕಟೇಶ್ 36ಕ್ಕೆ2, ಜೆ. ಸುಚಿತ್ 37ಕ್ಕೆ2). ಪಂದ್ಯ ಶ್ರೇಷ್ಠ: ಬಿಆರ್ ಶರತ್

ನಾಳೆಯ ಪಂದ್ಯಗಳು

ಬೆಂಗಳೂರು ಬ್ಲಾಸ್ಟರ್ಸ್‌-ಹುಬ್ಬಳ್ಳಿ ಟೈಗರ್ಸ್‌

ಆರಂಭ: ಮಧ್ಯಾಹ್ನ 1ಕ್ಕೆ

ಮೈಸೂರು ವಾರಿಯರ್ಸ್‌- ಗುಲ್ಬರ್ಗಾ ಮಿಸ್ಟಿಕ್ಸ್

ಆರಂಭ: ಸಂಜೆ 5.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.