ವಡೋದರ: ಪಾಂಡ್ಯ ಕುಟುಂಬ ಈಗ ಹೊಸ ಅತಿಥಿಯ ಆಗಮನದಿಂದ ಸಂಭ್ರಮದಲ್ಲಿ ತೇಲಾಡುತ್ತಿದೆ. ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾದ ಬಗ್ಗೆ ಸಂಭ್ರಮಿಸುತ್ತಿದ್ದರೆ, ಹಾರ್ದಿಕ್ ಪಾಂಡ್ಯರ ಅಣ್ಣ ಕೃನಾಲ್ ಪಾಂಡ್ಯ ದೊಡ್ಡಪ್ಪನಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ಹಾರ್ದಿಕ್-ನತಾಶಾ ದಂಪತಿಯ ಮಗುವನ್ನು ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಂಡಿರುವ ಕೃನಾಲ್ ಪಾಂಡ್ಯ, 'ಖುಷಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಾಗುತ್ತಿಲ್ಲ. ನಾನೀಗ ಈ ಸುಂದರ ಗಂಡು ಮಗುವಿಗೆ ದೊಡ್ಡಪ್ಪನಾಗಿದ್ದೇನೆ. ಸಹೋದರ ಮತ್ತು ನತಾಶಾ ನಿಮಗೆ ಅಭಿನಂದನೆಗಳು. ಸಣ್ಣವನನ್ನೂ ದೊಡ್ಡಪ್ಪ ಪ್ರೀತಿಸುತ್ತಾರೆ' ಎಂದು ಕೃನಾಲ್ ಪಾಂಡ್ಯ ಬರೆದುಕೊಂಡಿದ್ದಾರೆ.
ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮುಂಬರುವ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡಕ್ಕೂ ಆಯ್ಕೆಯಾದರೆ ಇನ್ನು 150 ದಿನಗಳಿಗೂ ಹೆಚ್ಚು ಕಾಲ ಮಗುವಿನಿಂದ ದೂರ ಉಳಿಯಬೇಕಾಗುತ್ತದೆ. ಕೃನಾಲ್ ಪಾಂಡ್ಯ ಕೂಡ ಭಾರತ ತಂಡವನ್ನು ಟಿ20 ಕ್ರಿಕೆಟ್ನಲ್ಲಿ ಪ್ರತಿನಿಧಿಸಿದ್ದಾರೆ.