ಕ್ರೀಡೆ

ಕೆಆರ್‌ಎಸ್ ಹಿನ್ನೀರಲ್ಲೂ ಜಲ ಸಾಹಸ ಕ್ರೀಡೆ?


ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜನೆ


ಅವಿನಾಶ್ ಜೈನಹಳ್ಳಿ ಮೈಸೂರು
ಜಲಸಾಹಸ ಕ್ರೀಡಾ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ. ದಸರಾ ಮಹೋತ್ಸವ ಅಂಗವಾಗಿ ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಜಲಸಾಹಸ ಕ್ರೀಡೆಗಳನ್ನು ಈ ಬಾರಿ ಎರಡು ಕಡೆ ಆಯೋಜಿಸಲಾಗುತ್ತಿದೆ.
ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಸಾರ್ವಜನಿಕರಿಗೆ ಜೋಶ್ ನೀಡುವ ಉದ್ದೇಶದಿಂದ ಈ ಬಾರಿ ಪ್ರತಿ ವರ್ಷ ನಡೆಯುವ ವರುಣ ಕೆರೆ ಜತೆಗೆ ಕೆಆರ್‌ಎಸ್ ಹಿನ್ನೀರಿನಲ್ಲೂ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕರೊನಾದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಮಹೋತ್ಸವಕ್ಕೂ ಈ ಬಾರಿ ಜೀವಕಳೆ ಬಂದಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಸಾಹಸ ಪ್ರಿಯರಿಗೆ ಥ್ರಿಲ್ ನೀಡುವ ಜಲಸಾಹಸ ಕ್ರೀಡೆಗಳನ್ನು ಈ ಬಾರಿ ವಿಭಿನ್ನ ರೀತಿ ಆಯೋಜಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದಾಗಿದೆ.


ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ತಿ.ನರಸೀಪುರ ರಸ್ತೆಯಲ್ಲಿರುವ ವರುಣ ಕೆರೆಯಲ್ಲಿ ವರ್ಷಪೂರ್ತಿ ‘ಜಲ ಸಾಹಸ ಕ್ರೀಡೆ’ಗಳು ನಡೆಯುತ್ತಿವೆ. ಟೆಂಡರ್ ಪಡೆದಿರುವ ಖಾಸಗಿ ಸಾಹಸ ಕ್ರೀಡಾ ಸಂಸ್ಥೆ ನಾನಾ ಸಾಹಸ ಕ್ರೀಡೆಗಳನ್ನು ನಡೆಸಿಕೊಂಡು ಬರುತ್ತಿದೆ. ಆದರೀಗ ದಸರಾ ಮಹೋತ್ಸವ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಕೆಆರ್‌ಎಸ್‌ನ ಹಿನ್ನೀರಿನಲ್ಲೂ ‘ಜಲಸಾಹಸ ಕ್ರೀಡೆ’ ಆಯೋಜಿಸಲು ಚಿಂತಿಸಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ ನಾಲ್ಕನೇ ಬಾರಿಗೆ ಕೆಆರ್‌ಎಸ್ ಹಿನ್ನೀರಿನಲ್ಲೂ ಜಲಸಾಹಸ ಕ್ರೀಡೆ ಆಯೋಜಿಸಿದಂತಾಗುತ್ತದೆ. ಸಾರ್ವಜನಿಕರು ಸೆ.26 ರಿಂದ ಒಂದು ತಿಂಗಳ ಕಾಲ ಎರಡು ಕಡೆ ಜಲಸಾಹಸ ಕ್ರೀಡೆಗಳಲ್ಲಿ ಮಿಂದೇಳಬಹುದಾಗಿದೆ.

ಯಾವ ಯಾವ ಸಾಹಸ?: ಪ್ಯಾರಾಸೇಲಿಂಗ್, ವಾಟರ್ ಜೆಟ್, ಫ್ರೋಟಿಂಗ್ ಜೆಟ್, ಕೆನೊಯಿಂಗ್, ವಿಂಡ್ ಸರ್ಫಿಂಗ್‌ನಂಥ ಸಾಹಸ ಕ್ರೀಡೆಗಳನ್ನು ಆಡಿ ಖುಷಿ ಪಡಬಹುದಾಗಿದೆ. ಜತೆಗೆ ಮೈನವಿರೇಳಿಸುವ ಜೆಟ್‌ಸ್ಕೀ ರೈಡ್, ರಾಫ್ಟಿಂಗ್, ದೇಹ ಒದ್ದೆಯಾಗಿಸುವ ಬನಾನ ರೈಡ್, ರೋಚಕತೆ ತುಂಬುವ ಸ್ಪೀಡ್ ಬೋಟ್, ಕಯಾಕಿಂಗ್ ಕೂಡ ಆಡಬಹುದು. ಈ ಎಲ್ಲ ಕ್ರೀಡೆಗಳಿಗೂ ಮಾರ್ಗದರ್ಶಕರು ಇರುತ್ತಾರೆ. ಸ್ಪೀಡ್‌ಬೋಟ್ ಹಾಗೂ ಬನಾನರೈಡ್‌ನಲ್ಲಿ ಆರು ಜನ ಕುಳಿತು ಪ್ರಯಾಣಿಸಬಹುದು. ರ‌್ಯಾಫ್ಟಿಂಗ್‌ನಲ್ಲಿ ಏಳು ಜನ ಕುಳಿತು ಹೋಗಬಹುದು. ಕಯಾಕಿಂಗ್‌ನಲ್ಲಿ ಒಬ್ಬರು ಅಥವಾ ಇಬ್ಬರು ಕುಳಿತು ಸಾಗುವ ವ್ಯವಸ್ಥೆ ಇರುತ್ತದೆ. ಜಲಸಾಹಸ ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲರಿಗೂ ಸುರಕ್ಷಿತೆ ಸಲುವಾಗಿ ಲೈಫ್ ಜಾಕೆಟ್ ಹಾಕಲಾಗುತ್ತದೆ. ಎಲ್ಲ ರೀತಿಯ ಸಾಹಸ ಕ್ರೀಡೆಗಳನ್ನು ಆಡಿ ಮಜಾ ಮಾಡಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ನಾನಾ ಸಾಹಸ ಕ್ರೀಡೆ ಆಯೋಜನೆ
ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಏತನ್ಮಧ್ಯೆ, ಈ ಬಾರಿಯ ದಸರಾದಲ್ಲಿ ನಗರದ ವಿವಿಧೆಡೆ ಭೂಸಾಹಸ ಕ್ರೀಡೆ ಆಯೋಜಿಸಲು ಇಲಾಖೆ ಮುಂದಾಗಿದೆ. ಕುಪ್ಪಣ್ಣ ಪಾರ್ಕ್ ಬಳಿ ಕೃತಕ ಗೋಡೆ ಹತ್ತುವುದು, ಹಗ್ಗ ಹಿಡಿದು ಹತ್ತುವುದು ಜತೆಗೆ ಇತರ ಸ್ಪರ್ಧೆಗಳನ್ನು ನಗರದ ನಾನಾ ಕಡೆ ಆಯೋಜಿಸಲು ಇಲಾಖೆ ನಿರ್ಧರಿಸಿದೆ. ವಿಶೇಷವಾಗಿ ಮಕ್ಕಳಿಗೆ ಈ ಬಾರಿ ಮಿನಿ ಸಾಹಸ ಕ್ರೀಡೆಗಳನ್ನು ಆಯೋಜಿಸಲು ಮುಂದಾಗಿದೆ. ಮನರಂಜನೆಗಾಗಿ ಮಕ್ಕಳಿಗೆ ಹಾಕಿ, ಕುಸ್ತಿ, ಬಾಕ್ಸಿಂಗ್ ಸೇರಿದಂತೆ ಇತರೆ ಸ್ಪರ್ಧೆಗಳು ಇರಲಿವೆ. ಚಾಮುಂಡಿ ಬೆಟ್ಟದದಲ್ಲಿ ರಾಜ್ಯ ಮಟ್ಟದ ಬೆಟ್ಟ ಹತ್ತುವ ಸ್ಪರ್ಧೆ ಹಾಗೂ ಮಕ್ಕಳಿಗೆ ಬೆಟ್ಟದ ಅಧ್ಯಯವನ್ನು ಆಯೋಜಿಸಲು ಚಿಂತಿಸಲಾಗಿದೆ. ಬೆಟ್ಟಕ್ಕೆ ಮಕ್ಕಳನ್ನು ಕರೆದೊಯ್ದು ಅಲ್ಲಿನ ಪ್ರಕೃತಿ ಸಂಪತ್ತು, ಮರ ಗಿಡ, ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಪರಿಚಯ ಮಾಡಿಕೊಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಎರಡು ವರ್ಷಗಳ ಬಳಿಕ ದಸರಾ ಮಹೋತ್ಸವದಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ವರುಣ ಕೆರೆಯ ಜತೆಗೆ ಕೆಆರ್‌ಎಸ್ ಹಿನ್ನೀರಿನಲ್ಲೂ ಆಯೋಜಿಸಲು ಚಿಂತಿಸಲಾಗಿದೆ. ಜತೆಗೆ, ಹೊಸ ಸಾಹಸ ಕ್ರೀಡೆಗಳನ್ನು ಸೇರಿಸಲೂ ಚಿಂತಿಸಲಾಗಿದೆ. ಬೆಟ್ಟ ಹತ್ತುವ ಸ್ಪರ್ಧೆ, ಕೃತಕ ಗೋಡೆ ಹತ್ತುವುದು, ಹಗ್ಗ ಹಿಡಿದು ಹತ್ತುವುದು ಸೇರಿದಂತೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.ಸುರೇಶ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ