ಕ್ರೀಡೆ

ಇಂದು ಕೆಕೆಆರ್- ಸನ್‌ರೈಸರ್ಸ್‌ ಪ್ರಶಸ್ತಿ ಕಾದಾಟ: ಚೆಪಾಕ್‌ನಲ್ಲಿ ಐಪಿಎಲ್ ಫೈನಲ್

ಚೆನ್ನೈ: ಚೊಚ್ಚಲ ಬಾರಿ ಪ್ರಶಸ್ತಿ ಎತ್ತಿಹಿಡಿದ ಅಂಗಣ, ಅಂದಿನ ನಾಯಕನ ಮಾರ್ಗದರ್ಶನದಲ್ಲಿ 10 ವರ್ಷಗಳ ಬಳಿಕ ಮತ್ತೆ ಅದೇ ಅಂಗಣದಲ್ಲಿ ಚಾಂಪಿಯನ್ ಆಗುವ ಹಂಬಲದಲ್ಲಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ಭಾನುವಾರ ಚೆಪಾಕ್ ಅಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ. ಕೆಕೆಆರ್ ಗೆದ್ದರೆ 3ನೇ ಬಾರಿ ಪ್ರಶಸ್ತಿ ಗೆದ್ದ ದಾಖಲೆ ಬರೆಯಲಿದ್ದು, ಸನ್‌ರೈಸರ್ಸ್‌ ಗೆದ್ದರೆ ಎಂಟು ವರ್ಷಗಳ ಬಳಿಕ 2ನೇ ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಲಿದೆ. ಹಾಲಿ ಟೂರ್ನಿಯಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದಾಗ ಶ್ರೇಯಸ್ ಅಯ್ಯರ್ ಬಳಗವೇ ಮೇಲುಗೈ ಸಾಧಿಸಿದೆ. ಆತಿಥೇಯ ತಂಡವಿಲ್ಲದ ಸೂಪರ್ ಸಂಡೇ ಸೆಣಸಾಟದಲ್ಲಿ ಪ್ರಶಸ್ತಿ ಯಾರು ಎತ್ತಿ ಹಿಡಿಯಲಿದ್ದಾರೆ ಎಂಬುದು ಕ್ರಿಕೆಟ್‌ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನದೊಂದಿಗೆ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್‌ ತಂಡವನ್ನು ಮಣಿಸಿ ಮೊದಲ ತಂಡವಾಗಿ ಫೈನಲ್‌ಗೇರಿದ್ದ ಕೆಕೆಆರ್ ತಂಡಕ್ಕೆ ಮೆಂಟರ್ ಗೌತಮ್ ಗಂಭೀರ್ ಪ್ರಮುಖ ಶಕ್ತಿ ಜತೆಗೆ ಸ್ಫೂರ್ತಿ. ಆದರೆ 2014ರಲ್ಲಿ ಕೆಕೆಆರ್ ಕಪ್ ಗೆದ್ದಾಗ ತಂಡದ ಸಹ ಆಟಗಾರನಾಗಿದ್ದ ಪ್ಯಾಟ್ ಕಮ್ಮಿನ್ಸ್ ಈಗ ಸನ್‌ರೈಸರ್ಸ್‌ನ ನಾಯಕನಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕಮ್ಮಿನ್ ನಾಯಕತ್ವದ ಯಶಸ್ಸು ಹಾಗೂ ಐಪಿಎಲ್‌ನಲ್ಲಿ ಗಂಭೀರ್ ಅನುಭವದ ನಡುವಿನ ಪೈಪೋಟಿ ಇದಾಗಿದೆ. ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತಿದ್ದ ಸನ್‌ರೈಸರ್ಸ್‌ ಕ್ವಾಲಿೈಯರ್-2ರಲ್ಲಿ ಬೌಲಿಂಗ್ ಮೂಲಕ ಕಮಾಲ್ ಮಾಡಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಅನುಭವಿ ಪಡೆ ಹೊಂದಿರುವ ಕೆಕೆಆರ್ ಫೇವರಿಟ್ ಎನಿಸಿದೆ.

ಮುಖಾಮುಖಿ: 27

ಕೆಕೆಆರ್: 18

ಸನ್‌ರೈಸರ್ಸ್‌: 9

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ