ಕ್ರೀಡೆ

ಐರ್ಲೆಂಡ್​ ವಿರುದ್ಧ ಕೊಹ್ಲಿ ಬೇಗ ಔಟ್​ ಆಗಿದ್ದೇ ಒಳ್ಳೆಯದು! ಸುನಿಲ್​ ಗವಾಸ್ಕರ್​ ಶಾಕಿಂಗ್​ ಹೇಳಿಕೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಟಿ20 ವಿಶ್ವಕಪ್​ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದಿದೆ. ಐರ್ಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ವಿಶ್ವಕಪ್‌ನಲ್ಲಿ ಬೇಟೆ ಆರಂಭಿಸಿದೆ. ಆದರೆ ಈ ಪಂದ್ಯದಲ್ಲಿ ಅನೇಕರಿಗೆ ನಿರಾಸೆ ಮೂಡಿಸಿದ್ದು ಮಾತ್ರ ವಿರಾಟ್ ಕೊಹ್ಲಿ ಆಟ. ಏಕೆಂದರೆ, ಅವರು ಕಡಿಮೆ ರನ್​ಗೆ ಔಟಾದರು. 5 ಎಸೆತಗಳನ್ನು ಎದುರಿಸಿದ ಕೊಹ್ಲಿ ಕೇವಲ ಒಂದು ರನ್ ಗಳಿಸಿ, ಪೆವಿಲಿಯನ್​ಗೆ ಮರಳಿದರು.ಆದರೆ ಕೊಹ್ಲಿಯ ಆರಂಭಿಕ ನಿರ್ಗಮನ ಟೀಂ ಇಂಡಿಯಾಕ್ಕೆ ಒಳ್ಳೆಯದು ಎಂದು ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಆಘಾತಕಾರಿ ಕಾಮೆಂಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಸದ್ಯ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ನಡೆದ ಐಪಿಎಲ್-2024 ನಲ್ಲಿ ಕೊಹ್ಲಿ ರನ್​ಗಳ ಪ್ರವಾಹವನ್ನು ಹರಿಸಿದರು. ಆರೆಂಜ್ ಕ್ಯಾಪ್ ಒಡೆಯರಾದರು. ಆದರೆ, ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ 1 ರನ್​ಗೆ ಔಟಾದರು. ಈ ಪಂದ್ಯದಲ್ಲಿ ಭಾರತ ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಚೇಸ್​ ಮಾಡಿತು. ಪ್ರಮುಖ ಪಂದ್ಯದಲ್ಲಿ ವಿರಾಟ್​ ಕಡಿಮೆ ರನ್​ ಗಳಿಸಿದ್ದು ಅಭಿಮಾನಿಗಳಿಗೆ ಬೇಸರ ತರಿಸಿತು. ವಿರಾಟ್​ ಶತಕ ಸಿಡಿಸಿ ದಾಖಲೆ ಬರೆಯಬಹುದು ಅಂದುಕೊಂಡಿದ್ದರು. ಏಕೆಂದರೆ, ಐಪಿಎಲ್​ನಲ್ಲಿ ಕೊಹ್ಲಿ ಅಬ್ಬರಿಸಿದ್ದರು. ಹೀಗಾಗಿ ಕೊಹ್ಲಿ ಮೇಲೆ ಭಾರಿ ನಿರೀಕ್ಷೆಯೇ ಇತ್ತು. ಆದರೆ, ಅದು ಮೊದಲ ಪಂದ್ಯದಲ್ಲಿ ಹುಸಿಯಾಯಿತು.

ಆದರೆ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಡಿಮೆ ಸ್ಕೋರ್​ಗೆ ಔಟಾಗಿದ್ದು ಟೀಮ್​ ಇಂಡಿಯಾಗೆ ಒಳ್ಳೆಯದು ಎಂದು ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಆಘಾತಕಾರಿ ಕಾಮೆಂಟ್ ಮಾಡಿದ್ದಾರೆ. ಸ್ಟಾರ್ ಆಟಗಾರರು ಒಂದು ಪಂದ್ಯದಲ್ಲಿ ಕಡಿಮೆ ರನ್ ಗಳಿಸಿದರೆ ಮುಂದಿನ ಪಂದ್ಯದಲ್ಲಿ ಖಂಡಿತ ಉತ್ತಮ ಆಟ ಆಡುತ್ತಾರೆ. ನಾನು ವಿರಾಟ್ ಕೊಹ್ಲಿ, ಬಾಬರ್ ಅಜಮ್, ಜೋ ರೂಟ್, ಸ್ಟೀವ್ ಸ್ಮಿತ್ ಅವರನ್ನು ಗಮನಿಸಿದ್ದೇನೆ. ವಿರಾಟ್ ಕೊಹ್ಲಿ ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಧ್ವಂಸಕರಾಗುತ್ತಾರೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೇಗನೆ ಔಟಾಗಿದ್ದರ ಬಗ್ಗೆ ಅಭಿಮಾನಿಗಳು ಚಿಂತಿಸುತ್ತಿಲ್ಲ, ಬದಲಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಹೇಗೆ ಆಡುತ್ತಾರೆ ಎಂದು ಯೋಚಿಸುತ್ತಿದ್ದಾರೆ ಎಂದು ಭಾರತದ ದಂತಕಥೆ ಕೊಹ್ಲಿ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಹೇಳಿದರು.

ಅಂದಹಾಗೆ ಟೀಮ್​ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜೂನ್ 9 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯಕ್ಕಾಗಿ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್​)