ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 70 ಶತಕಗಳನ್ನು ಸಿಡಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಂದ ಇದುವರೆಗೆ ಹಲವಾರು ಅತ್ಯುತ್ತಮ ಇನಿಂಗ್ಸ್ಗಳು ಬಂದಿವೆ. ಈ ಪೈಕಿ ಮಾಜಿ ಬ್ಯಾಟ್ಸ್ಮನ್ ಹಾಗೂ ಕೊಹ್ಲಿ ಅವರ ದೆಹಲಿಯ ಸಹ-ಆಟಗಾರರೂ ಆಗಿರುವ ಗೌತಮ್ ಗಂಭೀರ್ ಮೆಚ್ಚಿಕೊಂಡಿರುವ ಅತ್ಯುತ್ತಮ ಇನಿಂಗ್ಸ್ ಯಾವುದು ಗೊತ್ತೇ?
2012ರ ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 183 ರನ್ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಮಾಜಿ ಆರಂಭಿಕ ಗಂಭೀರ್ ಪ್ರಕಾರ ಇದುವೆ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಇದುವರೆಗೆ ಆಡಿರುವ ಅತ್ಯುತ್ತಮ ಇನಿಂಗ್ಸ್ ಆಗಿದೆ. ಢಾಕಾದಲ್ಲಿ ಪಾಕಿಸ್ತಾನದ 330 ರನ್ ಸವಾಲನ್ನು ಬೆನ್ನಟ್ಟುವ ವೇಳೆ ಕೊಹ್ಲಿ ಕೇವಲ 148 ಎಸೆತಗಳಲ್ಲಿ 22 ಬೌಂಡರಿ ಮತ್ತು ಸಿಕ್ಸರ್ ಒಳಗೊಂಡ 183 ರನ್ ಸಿಡಿಸಿದ್ದರು. ಈ ಮೂಲಕ ಭಾರತ ತಂಡ 6 ವಿಕೆಟ್ಗಳಿಂದ ಗೆಲುವು ದಾಖಲಿಸಿತ್ತು.
'ಮೊದಲನೆಯದಾಗಿ ನಮಗೆ 330 ರನ್ಗಳನ್ನು ಬೆನ್ನಟ್ಟು ಕಠಿಣ ಸವಾಲಿತ್ತು. ಭಾರತ ತಂಡ ಖಾತೆ ತೆರೆಯುವ ಮೊದಲೇ ವಿಕೆಟ್ ಕೂಡ ಉರುಳಿತ್ತು. ಆ ಸಮಯದಲ್ಲಿ 330 ರನ್ಗಳ ಪೈಕಿ 183 ರನ್ಗಳನ್ನು ಸಿಡಿಸುವುದು, ಅದೂ ಪಾಕಿಸ್ತಾನ ವಿರುದ್ಧ, ಅದಲ್ಲದೆ ಆ ಸಮಯದಲ್ಲಿ ಅವರಿನ್ನೂ ಅನನುಭವಿ ಆಟಗಾರರಾಗಿದ್ದರು' ಎಂದು ಗಂಭೀರ್ ವಿವರಿಸಿದ್ದಾರೆ. ಆ ಪಂದ್ಯದಲ್ಲಿ ಗಂಭೀರ್ ಶೂನ್ಯಕ್ಕೆ ಔಟಾಗಿದ್ದರು.
ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊಹಮದ್ ಹಫೀಜ್, ಉಮರ್ ಗುಲ್, ಐಜಾಜ್ ಚೀಮಾ, ಸಯೀದ್ ಅಜ್ಮಲ್, ಶಾಹಿದ್ ಅಫ್ರಿದಿ, ವಹಾಬ್ ರಿಯಾಜ್ ಅವರಂಥ ಅನುಭವಿ ಬೌಲಿಂಗ್ ಪಡೆಯನ್ನು ಹೊಂದಿತ್ತು. ಆದರೆ ಇದಾವುದನ್ನೂ ಲೆಕ್ಕಿಸದೆ ಕೊಹ್ಲಿ ಸ್ಫೋಟಕ ಆಟವಾಡಿದ್ದರು. 'ನನ್ನ ಪ್ರಕಾರ ಅದುವೇ ವಿರಾಟ್ ಕೊಹ್ಲಿಯ ಅತ್ಯುತ್ತಮ ಇನಿಂಗ್ಸ್ ಆಗಿದೆ' ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಗಂಭೀರ್ ವಿಕೆಟ್ ಮೊದಲ ಓವರ್ನಲ್ಲೇ ಉರುಳಿದ ಬಳಿಕ ಕೊಹ್ಲಿ, ಸಚಿನ್ ತೆಂಡುಲ್ಕರ್ (52) ಜತೆಗೆ 133 ರನ್ ಜತೆಯಾಟವಾಡಿದ್ದರು. ಬಳಿಕ ರೋಹಿತ್ ಶರ್ಮ (68) ಜತೆಗೂಡಿ 3ನೇ ವಿಕೆಟ್ಗೆ 172 ರನ್ ಸೇರಿಸಿದ್ದರು. ಭಾರತ ಗೆಲುವಿನಿಂದ 12 ರನ್ ದೂರವಿದ್ದಾಗ ಕೊಹ್ಲಿ ಔಟಾಗಿದ್ದರು. ಅಂತಿಮವಾಗಿ ಸುರೇಶ್ ರೈನಾ (12) ಮತ್ತು ಎಂಎಸ್ ಧೋನಿ (4) ತಂಡವನ್ನು 47.5 ಓವರ್ಗಳಲ್ಲಿ ಗೆಲುವಿನ ದಡ ಸೇರಿಸಿದ್ದರು.