ಕ್ರೀಡೆ

ಆರ್‌ಸಿಬಿ ಮೊದಲ ಸೋಲಿಗೆ ವಿರಾಟ್​ ಕೊಹ್ಲಿ ಏನಂದರು ಗೊತ್ತೇ?

ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದೆದುರು ಗುರುವಾರದ ಐಪಿಎಲ್ ಪಂದ್ಯದಲ್ಲಿ ಕಂಡ 97 ರನ್‌ಗಳ ಹೀನಾಯ ಸೋಲಿನ ಹೊಣೆಯನ್ನು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರೇ ಹೊತ್ತುಕೊಂಡಿದ್ದಾರೆ. ಶತಕವೀರ ಕೆಎಲ್ ರಾಹುಲ್ ಅವರ 2 ಕ್ಯಾಚ್‌ಗಳನ್ನು ಸ್ವತಃ ಕೈಚೆಲ್ಲಿದ ಬಗ್ಗೆ ಕೊಹ್ಲಿ ಬೇಸರವನ್ನೂ ವ್ಯಕ್ತಪಡಿಸಿದರು.

ಕೆಎಲ್ ರಾಹುಲ್ (132) ಅಮೋಘ ಆಟದಿಂದ ಪಂಜಾಬ್ ತಂಡ 3 ವಿಕೆಟ್‌ಗೆ 206 ರನ್ ಪೇರಿಸಿದರೆ, ಆರ್‌ಸಿಬಿ ತಂಡ ಪ್ರತಿರೋಧವನ್ನೂ ತೋರದೆ 17 ಓವರ್‌ಗಳಲ್ಲಿ 109 ರನ್‌ಗೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಕಳೆದ ಪಂದ್ಯದ ಹೀರೋ ದೇವದತ್ ಪಡಿಕಲ್ (1) ಕೂಡ ನಿರಾಸೆ ಮೂಡಿಸಿದರು. ಆರನ್ ಫಿಂಚ್ (20) ಮತ್ತು ಎಬಿ ಡಿವಿಲಿಯರ್ಸ್‌ (28) ಅವರಿಂದಲೂ ನಿರೀಕ್ಷಿತ ಹೋರಾಟ ಬರಲಿಲ್ಲ. ಪಂಜಾಬ್ ಪರ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ ಮತ್ತು ಎಂ. ಅಶ್ವಿನ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

‘ನಾನೇ ಎದುರು ನಿಂತು ಸೋಲಿನ ಬಾಣವನ್ನು ಎದುರಿಸುವೆ. ಇದು ನನಗೆ ಉತ್ತಮ ದಿನವಾಗಿರಲಿಲ್ಲ. ಕ್ರೀಸ್‌ನಲ್ಲಿ ನೆಲೆಯೂರಿದ್ದ ಕೆಎಲ್‌ಗೆ (ರಾಹುಲ್) ಕೆಲ ಅವಕಾಶಗಳನ್ನು ಬಿಟ್ಟುಕೊಟ್ಟೆವು. ಅದು ನಮಗೆ 35-40 ರನ್‌ಗಳಷ್ಟು ದುಬಾರಿಯಾಯಿತು’ ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿದರು.

ಪಂಜಾಬ್ ತಂಡವನ್ನು 180 ರನ್‌ಗಳಿಗೆ ನಿಯಂತ್ರಿಸಿದ್ದರೆ ನಾವು ಚೇಸಿಂಗ್ ವೇಳೆ ಒತ್ತಡಕ್ಕೆ ಸಿಲುಕಿಕೊಳ್ಳುತ್ತಿರಲಿಲ್ಲ. ಈ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ ಎಂದು ಕೊಹ್ಲಿ ಹೇಳಿದರು.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಶ್ ಫಿಲಿಪ್‌ರನ್ನು ತಮ್ಮ ಬದಲಾಗಿ 3ನೇ ಕ್ರಮಾಂಕದಲ್ಲಿ ಆಡಿಸಿದ ಬಗ್ಗೆ ವಿವರಣೆ ನೀಡಿದ ಕೊಹ್ಲಿ, ‘ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಬಿಬಿಎಲ್‌ನಲ್ಲಿ ಅವರು ಮೇಲಿನ ಕ್ರಮಾಂಕದಲ್ಲಿ ಆಡಿ ಉತ್ತಮ ನಿರ್ವಹಣೆ ತೋರಿದ್ದರು. ಹೀಗಾಗಿ ಇಲ್ಲೂ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಯಸಿದ್ದೆವು’ ಎಂದು ಹೇಳಿದರು. ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಸೋಮವಾರ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಆರ್‌ಸಿಬಿ ತಂಡಕ್ಕಿಂತ ರಾಹುಲ್ ಅವರೊಬ್ಬರೇ 23 ರನ್ ಅಧಿಕ ಗಳಿಸಿದರು. ಇದು ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್ ಒಬ್ಬ ಎದುರಾಳಿ ತಂಡಕ್ಕಿಂತ ಅಧಿಕ ರನ್ ಗಳಿಸಿದ 6ನೇ ನಿದರ್ಶನವಾಗಿದೆ. ಎಬಿ ಡಿವಿಲಿಯರ್ಸ್‌ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಸಿಡಿಸಿದ 6ನೇ ಬ್ಯಾಟ್ಸ್‌ಮನ್ ಎನಿಸಿದರು. ಕ್ರಿಸ್ ಗೇಲ್, ಪೊಲ್ಲಾರ್ಡ್, ಮೆಕ್ಕಲಂ, ವ್ಯಾಟ್ಸನ್, ರಸೆಲ್ ಹಿಂದಿನ ಸಾಧಕರು.

ವಿರಾಟ್ ಕೊಹ್ಲಿಗೆ ₹12 ಲಕ್ಷ ದಂಡ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ದಂಡ ಶಿಕ್ಷೆಯ ಬರೆ ಬಿದ್ದಿದೆ. ಪಂದ್ಯದ ನಿಧಾನಗತಿ ಓವರ್‌ಗಾಗಿ ಕೊಹ್ಲಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದು ಆರ್‌ಸಿಬಿ ತಂಡದ ಮೊದಲ ಓವರ್‌ಧಾರಣೆ ಉಲ್ಲಂಘನೆಯಾಗಿರುವುದರಿಂದ ಈ ಪ್ರಮಾಣದ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.