ನವದೆಹಲಿ: ಕಳೆದ ದಶಕದಲ್ಲಿ ಶತಕಗಳ ಮೇಲೆ ಶತಕಗಳನ್ನು ಸಿಡಿಸುತ್ತ ರನ್ಪ್ರವಾಹವನ್ನೇ ಹರಿಸುತ್ತ ಜಾಗತಿಕ ಕ್ರಿಕೆಟ್ನಲ್ಲಿ ಮೆರೆದಾಡಿದ ಬ್ಯಾಟರ್ ವಿರಾಟ್ ಕೊಹ್ಲಿ. ಆದರೆ ಕಳೆದ 2 ವರ್ಷಗಳಿಂದ ಅವರ ಬ್ಯಾಟ್ ಸರಾಗವಾಗಿ ರನ್ ಗಳಿಸಲು ಪರದಾಡುತ್ತಿದೆ. ಶತಕ ಸಿಡಿಸುವುದನ್ನಂತೂ ಸಂಪೂರ್ಣವಾಗಿ ಮರೆತೇ ಬಿಟ್ಟಿದೆ! ಇದರಿಂದ ಮೊದಲಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ಕಳೆದುಕೊಂಡಿದ್ದರು ಅಥವಾ ಬ್ಯಾಟಿಂಗ್ನತ್ತ ಗಮನಹರಿಸುವ ನಾಯಕತ್ವವನ್ನು ತ್ಯಜಿಸಿದ್ದರು ಎಂದೂ ಹೇಳಬಹುದು. ಆದರೆ ಇನ್ನೂ ಅವರು ಬ್ಯಾಟಿಂಗ್ ಲಯ ಕಂಡುಕೊಳ್ಳದೆ ಇರುವುದರಿಂದ ಈಗ ತಂಡದಿಂದಲೇ ಹೊರಬೀಳುವ ಅಪಾಯಕ್ಕೂ ಸಿಲುಕಿದ್ದಾರೆ.
ಹೌದು, ಮುಂಬರುವ ಇಂಗ್ಲೆಂಡ್ ಪ್ರವಾಸದ ಕೊನೇ 2 ಟಿ20 ಪಂದ್ಯಗಳಲ್ಲಿ ಕೊಹ್ಲಿ ನಿರೀಕ್ಷಿತ ರೀತಿಯಲ್ಲಿ ರನ್ ಗಳಿಸದಿದ್ದರೆ ತಂಡದಿಂದಲೇ ಹೊರಬೀಳುವ ಭೀತಿಯಲ್ಲಿದ್ದಾರೆ. ಇಷ್ಟು ಮಾತ್ರವಲ್ಲದೆ, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೂ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುವುದು ಅನುಮಾನವೆನಿಸಲಿದೆ.
‘ಕೊಹ್ಲಿ ಭಾರತೀಯ ಕ್ರಿಕೆಟ್ಗೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಮತ್ತು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈಗ ಅವರು ರನ್ ಗಳಿಸಲು ಪರದಾಡುತ್ತಿದ್ದಾರೆ. 32 ವರ್ಷದ ಕೊಹ್ಲಿಗೆ ಫಾಮ್ರ್ ಕಂಡುಕೊಳ್ಳಲು ಇನ್ನಷ್ಟು ದೀರ್ಘಕಾಲ ಅವಕಾಶ ನೀಡಲು ಸಾಧ್ಯವಿಲ್ಲ. ಆಯ್ಕೆಗಾರರು ಫಾಮ್ರ್ ಆಧಾರದಲ್ಲಿ ಆಟಗಾರರನ್ನು ಆರಿಸಬೇಕಾಗುತ್ತದೆ, ಅವರ ವರ್ಚಸ್ಸಿನ ಮೇಲಲ್ಲ. ಕೊಹ್ಲಿ ಶೀಘ್ರದಲ್ಲೇ ನಿರ್ವಹಣೆ ತೋರಬೇಕು, ಇಲ್ಲದಿದ್ದರೆ ಹೊರನಡೆಯಬೇಕು. ಇಂಗ್ಲೆಂಡ್ನಲ್ಲಿ ಅವರು ಹೆಚ್ಚಿನ ರನ್ ಗಳಿಸದಿದ್ದರೆ ಆಯ್ಕೆಗಾರರು ಟಿ20 ವಿಶ್ವಕಪ್ಗೆ ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಬೇರೆ ಆಯ್ಕೆಗಳನ್ನು ಪರಿಗಣಿಸಬಹುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬರ್ವಿುಂಗ್ಹ್ಯಾಂ ಟೆಸ್ಟ್ ನಡೆದ ಎರಡೇ ದಿನಗಳಲ್ಲಿ ಮೊದಲ ಟಿ20 ನಡೆಯುತ್ತಿರುವ ಕಾರಣ ಕೊಹ್ಲಿ ಅದರಲ್ಲಿ ಆಡುತ್ತಿಲ್ಲ. ಆದರೆ ನಂತರದ 2 ಟಿ20 ಪಂದ್ಯಗಳಲ್ಲಿ ಆಡಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಕೊಹ್ಲಿ ಹೇಗೆ ನಿರ್ವಹಣೆ ತೋರುತ್ತಾರೆ ಎಂಬುದನ್ನು ಗಮನಿಸಿ ತೀರ್ಮಾನ ಕೈಗೊಳ್ಳುವ ಸಲುವಾಗಿಯೇ ಆಯ್ಕೆಗಾರರು, ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಸರಣಿಗೆ ಇನ್ನೂ ತಂಡವನ್ನು ಆರಿಸಿಲ್ಲ ಎನ್ನಲಾಗಿದೆ. ಕೊಹ್ಲಿ ನೀರಸ ನಿರ್ವಹಣೆ ಮುಂದುವರಿಸಿದರೆ, ಟಿ20 ವಿಶ್ವಕಪ್ ತಂಡದ ಮಧ್ಯಮ ಕ್ರಮಾಂಕದಲ್ಲೂ ಅವರಿಗೆ ಸ್ಥಾನ ಕಲ್ಪಿಸುವುದು ಕಷ್ಟಕರವಾಗಲಿದೆ ಎಂಬುದು ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್ವೆುಂಟ್ ನಿಲುವಾಗಿದೆ.
ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಟಿ20 ಸರಣಿಯಲ್ಲಿ ಕಣಕ್ಕಿಳಿಯಬಹುದು. ಬುಮ್ರಾ ಟಿ20ಯಿಂದಲೂ ವಿಶ್ರಾಂತಿ ಪಡೆಯಬಹುದು. ಆದರೆ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಮಿಂಚದಿದ್ದರೆ ಅವರನ್ನು ಕೈಬಿಡುವ ನಿರ್ಧಾರವನ್ನು ಆಯ್ಕೆಗಾರರು ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಮಧ್ಯಮ ಕ್ರಮಾಂಕದಲ್ಲಿದೆ ನಿಕಟ ಪೈಪೋಟಿ: ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ನಿಕಟ ಪೈಪೋಟಿಯಲ್ಲಿದ್ದಾರೆ. ಇವರೆಲ್ಲರ ಇತ್ತೀಚೆಗಿನ ನಿರ್ವಹಣೆ ಕೊಹ್ಲಿಗಿಂತ ಉತ್ತಮವಾಗಿದೆ ಎಂದೂ ಹೇಳಬಹುದು. ಹೀಗಾಗಿ ಕೊಹ್ಲಿ ನೀರಸ ಪ್ರದರ್ಶನ ಮುಂದುವರಿಸಿದರೆ ಟಿ20 ವಿಶ್ವಕಪ್ ಟಿಕೆಟ್ನಿಂದಲೂ ವಂಚಿತರಾಗಬಹುದು.
ಇಂಗ್ಲೆಂಡ್ ಪಿಚ್ಗಳಲ್ಲಿ ಸಾಧ್ಯವಾದಷ್ಟು ತಡವಾಗಿ ಚೆಂಡನ್ನು ಆಡಬೇಕು. ಆದರೆ ಕೊಹ್ಲಿ ಚೆಂಡನ್ನು ಬೇಗನೆ ಆಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರು ಈ ಬಾರಿ 2018ರಲ್ಲಿ ಆಡಿದಂತೆ ಇಂಗ್ಲೆಂಡ್ನಲ್ಲಿ ಆಡುತ್ತಿಲ್ಲ. ಆಗ ಅವರು ಆಫ್ಸ್ಟಂಪ್ ಸುತ್ತ ಅತ್ಯಂತ ತಡವಾಗಿ ಚೆಂಡನ್ನು ಬಾರಿಸುತ್ತಿದ್ದರು. ಈ ಬಾರಿ ಅವರು ಫಾಮರ್್ನಲ್ಲಿಲ್ಲದ ಕಾರಣ, ಪ್ರತಿ ಎಸೆತದಲ್ಲೂ ರನ್ ಗಳಿಸುವ ಯತ್ನದಲ್ಲಿದ್ದಾರೆ. ಅವರಿಗೆ ಅದೃಷ್ಟವೂ ಕೈಕೊಡುತ್ತಿದೆ.
| ಸುನೀಲ್ ಗಾವಸ್ಕರ್