ನವದೆಹಲಿ: ಕರೊನಾದಿಂದಾಗಿ ಎಲ್ಲ ಕ್ರೀಡಾ ಚಟುವಟಿಕೆಗಳು ನಿಂತಿರುವ ನಡುವೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೀಗ ಗಾಯಕರಾಗಿ ಬದಲಾಗಿದ್ದಾರೆ. ಮಹಾಮಾರಿ ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹಿಸುವುದಕ್ಕಾಗಿ ಅವರು ಆನ್ಲೈನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
‘ಐ ಫಾರ್ ಇಂಡಿಯಾ’ ಅಭಿಯಾನದ ಅಂಗ ವಾಗಿ ಈ ಕ್ರೀಡಾಪಟುಗಳೊಂದಿಗೆ ಸಿನಿಮಾ ನಟರು, ಸಂಗೀತ ನಿರ್ದೇಶಕರು, ಗಾಯಕರು ಮತ್ತು ಉದ್ಯಮಿಗಳೂ ಭಾನುವಾರ ರಾತ್ರಿ ಆನ್ಲೈನ್ ಸಂಗೀತ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಿದ್ದಾರೆ. ಈ ಸಂಗೀತಗೋಷ್ಠಿಯಿಂದ ಬಂದ ಹಣ ‘ಗಿವ್ ಇಂಡಿಯಾ’ಗೆ ದೇಣಿಗೆಯಾಗಿ ಸಂದಾಯವಾಗಲಿದೆ. ಐ ಫಾರ್ ಇಂಡಿಯಾ ಅಭಿಯಾನದಿಂದ ಇದುವರೆಗೆ ಸಾಮಾಜಿಕ ಜಾಲತಾಣಗಳ ವಿವಿಧ ಚಟುವಟಿಕೆಗಳಿಂದ ಇದುವರೆಗೆ 52 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿದೆ ಎನ್ನಲಾಗಿದೆ.
‘2 ವಾರಗಳ ಹಿಂದೆಯಷ್ಟೇ ಭಾರತದ ಅತಿದೊಡ್ಡ ಸಂಗೀತಗೋಷ್ಠಿಗೆ ಸಿದ್ಧತೆಯನ್ನು ಆರಂಭಿಸಿದ್ದೆವು. ಈ ಮೂಲಕ ಲಾಕ್ಡೌನ್ನಿಂದ ಮನೆಯಲ್ಲಿರುವ ಜನರಿಗೆ ಮನರಂಜನೆ ನೀಡಲು ಮುಂದಾಗಿದ್ದೆವು. ನಾವು ಮನೆಯಿಂದಲೇ ಕೆಲಸ ನಿರ್ವಹಿಸುವ ಮೂಲಕ ಆರೋಗ್ಯ ಸೇವೆಯಲ್ಲಿ ನಿರತರಾಗಿರುವವರಿಗೆ ಗೌರವ ಅರ್ಪಿಸಿದ್ದೇವೆ. ಜತೆಗೆ ಕೆಲಸ, ಮನೆಯಿಲ್ಲದವರ ನೆರವಿಗಾಗಿ ಹಣ ಸಂಗ್ರಹಿಸಿದ್ದೇವೆ’ ಎಂದು ಐ ಫಾರ್ ಇಂಡಿಯಾ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಈ ಆನ್ಲೈನ್ ಕಾನ್ಸರ್ಟ್ನಲ್ಲಿ ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮ, ಶಾರುಖ್ ಖಾನ್, ಎಆರ್ ರೆಹಮಾನ್, ಆಮೀರ್ ಖಾನ್, ಐಶ್ವರ್ಯ ರೈ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ರಣವೀರ್ ಸಿಂಗ್, ಶ್ರೇಯಾ ಘೋಷಾಲ್, ಸೋನು ನಿಗಮ್ ವಿದ್ಯಾ ಬಾಲನ್ ಮತ್ತಿತರ ಸೆಲೆಬ್ರಿಟಿಗಳೂ ಪಾಲ್ಗೊಂಡಿದ್ದಾರೆ.