ಕ್ರೀಡೆ

ನಿವೃತ್ತಿಗೂ ಮುನ್ನ ಒಮ್ಮೆಯಾದ್ರೂ ಈ ಕೆಲ್ಸ ಮಾಡಿ ಪ್ಲೀಸ್​! ಕೊಹ್ಲಿ, ರೋಹಿತ್​ ಬಳಿ ಬೇಡಿಕೊಂಡ ಅಕ್ಮಲ್

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸುವ ಮೊದಲು ಈ ಒಂದು ಕೆಲಸ ಮಾಡಬೇಕೆಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಮಾದರಿ ಪಂದ್ಯಗಳಿಗೆ ಮಾತ್ರ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸದ್ಯ ಏಕದಿನ ಮತ್ತು ಟೆಸ್ಟ್​ ಮಾದರಿಗಳಲ್ಲಿ ಇನ್ನು ಕೆಲವು ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡುವ ಮುನ್ನ ಒಮ್ಮೆಯಾದರೂ ಪಾಕಿಸ್ತಾನಕ್ಕೆ ಬಂದು ಆಡಬೇಕೆಂದು ಕಮ್ರಾನ್​ ಅಕ್ಮಲ್ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಅಕ್ಮಲ್ ವಿನಂತಿಸಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮ ಶ್ರೇಷ್ಠ ಆಟಗಾರರಾಗಿದ್ದು, ಅವರಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಅಕ್ಮಲ್ ಹೇಳಿದ್ದಾರೆ. ಅವರ ವೃತ್ತಿಜೀವನವನ್ನು ಇನ್ನಷ್ಟು ಪೂರ್ಣಗೊಳಿಸಲು, ಒಮ್ಮೆಯಾದರೂ ಇಬ್ಬರು ಪಾಕಿಸ್ತಾನಕ್ಕೆ ಬಂದು ಆಡಬೇಕು ಎಂದು ಅಕ್ಮಲ್​ ಆಗ್ರಹಿಸಿದ್ದಾರೆ.

ಇನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಆ ದೇಶದ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಭಾರತ ತಂಡದ ಸುರಕ್ಷತೆಗೆ ಧಕ್ಕೆಯಾಗಿರುವುದರಿಂದ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ.

ಈ ಬಗ್ಗೆ ಈಗಾಗಲೇ ಐಸಿಸಿಗೆ ವಿವರಣೆ ನೀಡಲಾಗಿದೆ. ಚಾಂಪಿಯನ್ಸ್ ಟ್ರೋಫಿಯನ್ನು ‘ಹೈಬ್ರಿಡ್ ಮಾದರಿ’ಯಲ್ಲಿ ನಡೆಸುವಂತೆಯೂ ಮನವಿ ಮಾಡಿದೆ. ಯುಎಇಯಲ್ಲಿ ಟೀಮ್​ ಇಂಡಿಯಾ ಆಡುವ ಪಂದ್ಯಗಳನ್ನು ಆಯೋಜಿಸುವಂತೆ ಬಿಸಿಸಿಐ, ಐಸಿಸಿ ಬಳಿ ಕೇಳಿದೆ. ಆದರೆ, ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಪಾಕಿಸ್ತಾನ ಒಪ್ಪುತ್ತಿಲ್ಲ. ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಕಾರ್ಯಕ್ರಮಗಳಿಗೆ ಭಾರತಕ್ಕೂ ಹೋಗುವುದಿಲ್ಲ ಎಂದು ಬ್ಲಾಕ್‌ಮೇಲ್ ಮಾಡುತ್ತಿದೆ. ಏನೇ ಆದರೂ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಬಹುತೇಕ ಅನುಮಾನ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)