ಕ್ರೀಡೆ

ವಿಶ್ವ ಇಲೆವೆನ್ ವಿರುದ್ಧ ಢಾಕಾದಲ್ಲಿ ಅಂತಾರಾಷ್ಟ್ರೀಯ ಟಿ20 ಸರಣಿ ಏಷ್ಯಾXIಗೆ ಕೊಹ್ಲಿ, ರಾಹುಲ್

ಢಾಕಾ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಸೀಮಿತ ಓವರ್​ಗಳ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್ ಕೆಎಲ್ ರಾಹುಲ್ ವಿಶ್ವ ಇಲೆವೆನ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಏಷ್ಯಾ ಇಲೆವೆನ್ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜೀಬುರ್ ರೆಹಮಾನ್ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಎರಡು ಪಂದ್ಯಗಳ ಅಂತಾರಾಷ್ಟ್ರೀಯ ಮಾನ್ಯತೆಯ ಟಿ20 ಸರಣಿಯನ್ನು ಆಯೋಜಿಸಿದ್ದು, ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ತಂಡಗಳು ಮುಖಾಮುಖಿಯಾಗಲಿವೆ.

ಕೊಹ್ಲಿ ಲಭ್ಯತೆಯ ಮೇರೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅವರ ಹೆಸರನ್ನು ತಂಡದಲ್ಲಿ ಪ್ರಕಟಿಸಿದೆ. ಕೊಹ್ಲಿ ಲಭ್ಯ ಇರುವ ಬಗ್ಗೆ ಬಿಸಿಸಿಐ ಇನ್ನಷ್ಟೇ ಮಾಹಿತಿಯನ್ನು ನೀಡಬೇಕಿದೆ. ಮಾರ್ಚ್ 21 ಹಾಗೂ 22 ರಂದು ಢಾಕಾದಲ್ಲಿ ಈ ಪಂದ್ಯಗಳು ನಡೆಯಲಿವೆ.

ಭಾರತದಿಂದ ಒಟ್ಟು ನಾಲ್ಕು ಹೆಸರುಗಳನ್ನು ನಾವು ಪಡೆದಿದ್ದೇವೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹುಸೇನ್ ಹೇಳಿದ್ದಾರೆ. ಈವರೆಗೆ ನಾವು ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಆದರೆ, ರಿಷಭ್ ಪಂತ್, ಕುಲದೀಪ್ ಯಾದವ್, ಶಿಖರ್ ಧವನ್ ಹಾಗೂ ಮೊಹಮದ್ ಶಮಿ ಆಡಬಹುದು. ಅದರೊಂದಿಗೆ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಕೂಡ ಸರಣಿಯ ಒಂದು ಪಂದ್ಯ ಅಡುವ ಸಾಧ್ಯತೆ ಇದ್ದು, ಇನ್ನಷ್ಟೇ ಇದು ಅಂತಿಮವಾಗಬೇಕಿದೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಎರಡೂ ಪಂದ್ಯಗಳಲ್ಲಿ ಆಡಬೇಕು ಎನ್ನುವುದು ಬಿಸಿಬಿ ಬಯಕೆಯಾಗಿದೆ. ಆದರೆ, ಭಾರತ ತಂಡದ ಬಿಡುವಿಲ್ಲದ ವೇಳಾಪಟ್ಟಿ ಇರುವ ಕಾರಣ, ಕೊಹ್ಲಿ ಒಪ್ಪಿಗೆ ನೀಡಿದಲ್ಲಿ ಮಾತ್ರವೇ ಬಿಸಿಸಿಐ ಅವರನ್ನು ಕಳುಹಿಸಿಕೊಡಲಿದೆ. ‘ಕೊಹ್ಲಿ ಹೆಸರನ್ನು ಈಗಾಗಲೇ ಕಳುಹಿಸಿದ್ದೇವೆ. ಆದರೆ, ಆಡುವ ಬಗ್ಗೆ ಅಂತಿಮ ತೀರ್ಮಾನ ಅವರೇ ಮಾಡಬೇಕಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜ ತೆ ರ್ಚಚಿಸಿ ಅವರು ತೀರ್ಮಾನ ಮಾಡಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ವಾರ ಗಂಗೂಲಿಗೆ ಈ ಕುರಿತು ಪ್ರಶ್ನೆ ಮಾಡಿದ್ದಾಗ, ಏಷ್ಯಾ ಇಲೆವೆನ್ ಪರವಾಗಿ ಭಾರತದ ನಾಲ್ಕು ಅಥವಾ ಐವರು ಆಟಗಾರರು ಆಡಬಹುದು ಎಂದು ಹೇಳಿದ್ದರು. ಪಿಎಸ್​ಎಲ್ ನಡೆಯುತ್ತಿರುವ ಕಾರಣ ಹಾಗೂ ಬಿಸಿಸಿಐನ ವಿರೋಧದಿಂದಾಗಿ ಪಾಕಿಸ್ತಾನದ ಆಟಗಾರರು ಏಷ್ಯಾಇಲೆವೆನ್ ತಂಡದಲ್ಲಿ ಆಡುತ್ತಿಲ್ಲ.

ವಿಶ್ವ ಇಲೆವೆನ್​ಗೆ ಪ್ಲೆಸಿಸ್ ಸಾರಥ್ಯ

ವಿಶ್ವ ಇಲೆವೆನ್ ತಂಡ ಕೂಡ ಬಲಿಷ್ಠ ಆಟಗಾರರಿಂದ ಕೂಡಿದ್ದು, ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರ ಕ್ರಿಸ್ ಗೇಲ್, ಕೈರಾನ್ ಪೊಲ್ಲಾರ್ಡ್ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ

ಭಾರತ ತಂಡ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ. ಕಿವೀಸ್ ಪ್ರವಾಸ ಮುಗಿದ ಒಂದು ವಾರದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಿಗದಿಯಾಗಿದ್ದು, ಮಾರ್ಚ್ 12ರಂದು ಧರ್ಮಶಾಲಾದಲ್ಲಿ ಮೊದಲ ಏಕದಿನ ನಡೆಯಲಿದೆ. ಮಾರ್ಚ್ 15 ರಂದು ಲಖನೌ ಹಾಗೂ ಮಾರ್ಚ್ 18ರಂದು ಕೋಲ್ಕತದಲ್ಲಿ ಪಂದ್ಯ ನಡೆಯಲಿದ್ದರೆ, ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಲಿದೆ.

ಏಷ್ಯಾ ಇಲೆವೆನ್: ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕುಲದೀಪ್ ಯಾದವ್, ಮೊಹಮದ್ ಶಮಿ, ಥಿಸ್ಸರ ಪೆರೇರಾ, ಲಸಿತ್ ಮಾಲಿಂಗ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಮುಸ್ತಾಫಿಜುರ್ ರೆಹಮಾನ್, ತಮೀಮ್ ಇಕ್ಬಾಲ್, ಮುಶ್ಪೀಕರ್ ರಹೀಂ, ಲಿಟನ್ ದಾಸ್, ಸಂದೀಪ್ ಲಮಿಚನ್ನೆ, ಮಹಮದುಲ್ಲಾ.

ವಿಶ್ವ ಇಲೆವೆನ್: ಅಲೆಕ್ಸ್ ಹ್ಯಾಲ್ಸ್, ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್ (ನಾಯಕ), ನಿಕೋಲಸ್ ಪೂರನ್, ಬ್ರೆಂಡನ್ ಟೇಲರ್, ಜಾನಿ ಬೇರ್​ಸ್ಟೋ, ಕೈರಾನ್ ಪೊಲ್ಲಾರ್ಡ್, ಶೆಲ್ಡನ್ ಕಾಟ್ರೆಲ್, ಲುಂಜಿ ಎನ್​ಗಿಡಿ, ಆಂಡ್ರ್ಯೂ ಟೈ, ಮೆಕ್ಲೀನಘನ್.