ನವದೆಹಲಿ: ವೈಯಕ್ತಿಕ ಕಾರಣ ನೀಡಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ತಪ್ಪಿಸಿಕೊಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇದೀಗ 3 ಮತ್ತು 4ನೇ ಟೆಸ್ಟ್ನಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ನಲ್ಲೂ ಕೊಹ್ಲಿ ಆಡುವುದು ಅನುಮಾನ ಎನ್ನಲಾಗಿದೆ.
3ನೇ ಟೆಸ್ಟ್ ಫೆ. 15ರಿಂದ ರಾಜ್ಕೋಟ್ನಲ್ಲಿ ನಡೆದರೆ, 4ನೇ ಟೆಸ್ಟ್ ಫೆ.23ರಿಂದ ರಾಂಚಿಯಲ್ಲಿ ನಡೆಯಲಿದೆ. ಅಂತಿಮ ಟೆಸ್ಟ್ ಮಾ. 7ರಿಂದ ಧರ್ಮಶಾಲಾದಲ್ಲಿ ನಿಗದಿಯಾಗಿದೆ. ಸರಣಿ ಆರಂಭಕ್ಕೆ 3 ದಿನ ಮುನ್ನ ಕೊಹ್ಲಿ ಮೊದಲ 2 ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿತ್ತು. ಸರಣಿಯ ಉಳಿದ 3 ಪಂದ್ಯಗಳಿಗೆ ಭಾರತ ತಂಡ ಇನ್ನೂ ಪ್ರಕಟಗೊಂಡಿಲ್ಲ. ಗುರುವಾರ ಅಥವಾ ಈ ವಾರದೊಳಗೆ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಇನ್ನು ಗಾಯದಿಂದಾಗಿ 2ನೇ ಟೆಸ್ಟ್ ತಪ್ಪಿಸಿಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ 3ನೇ ಟೆಸ್ಟ್ಗೆ ಮರಳುವ ನಿರೀಕ್ಷೆ ಇದೆ. ಜತೆಗೆ 2ನೇ ಟೆಸ್ಟ್ನಿಂದ ವಿಶ್ರಾಂತಿ ಪಡೆದಿದ್ದ ವೇಗಿ ಮೊಹಮದ್ ಸಿರಾಜ್ ಕೂಡ 3ನೇ ಟೆಸ್ಟ್ಗೆ ಮರಳಲಿದ್ದಾರೆ ಎನ್ನಲಾಗಿದೆ.