ಬ್ರಿಜ್ಟೌನ್: ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿರುವ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದಲ್ಲೂ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದ್ದು, ಅಫ್ಘಾನಿಸ್ತಾನ ವಿರುದ್ಧ ಗುರುವಾರ ಸೆಣಸಲಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಲಯಕ್ಕೆ ಮರಳುವ ನಿರೀಕ್ಷೆಯೊಂದಿಗೆ ಭಾರತ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ.
ಭಾರತ ಲೀಗ್ ಹಂತದಲ್ಲಿ ಪಾಕಿಸ್ತಾನ ಎದುರು ಅಲ್ಪ ಮೊತ್ತವನ್ನು ರಕ್ಷಿಸಿಕೊಂಡು ಗೆದ್ದಿದ್ದು ಹೈಲೈಟ್ ಆಗಿದ್ದರೆ, ಅಫ್ಘಾನಿಸ್ತಾನ ತಂಡ ಮಾಜಿ ರನ್ನರ್ಅಪ್ ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಿ ಸೂಪರ್-8 ಪ್ರವೇಶಿಸಿದ ವಿಶ್ವಾಸದಲ್ಲಿದೆ. ಹೀಗಾಗಿ ಭಾರತಕ್ಕೆ ಈ ಪಂದ್ಯ ನಿರೀಕ್ಷಿಸಿದಷ್ಟು ಸುಲಭ ಸವಾಲು ಆಗುವ ಸಾಧ್ಯತೆ ಇಲ್ಲ. ಉಭಯ ತಂಡಗಳು ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿರುವುದರಿಂದ ಈ ಮುಖಾಮುಖಿ ಕುತೂಹಲ ಕೆರಳಿಸಿದೆ. ಆದರೆ, ಲೀಗ್ ಹಂತದ ಕೊನೇ ಪಂದ್ಯದಲ್ಲಿ ವಿಂಡೀಸ್ ಎದುರು ಆಫ್ಘನ್ ಬೌಲರ್ಗಳು ದುಬಾರಿಯಾಗಿದ್ದು ಹಿನ್ನಡೆ ಎನಿಸಿದೆ.
ಕೊಹ್ಲಿ ಮೇಲೆ ಕಣ್ಣು
ಐಪಿಎಲ್ನಲ್ಲಿ ರನ್ಮಳೆ ಹರಿಸಿದ್ದ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ನಲ್ಲಿ ಇನ್ನೂ ಎರಡಂಕಿ ತಲುಪಿಲ್ಲ. ಆದರೆ ಅವರು ಬಿಗ್ ಮ್ಯಾಚ್ ಪ್ಲೇಯರ್ ಆಗಿರುವುದರಿಂದ ಸೂಪರ್-8ನಲ್ಲಿ ಲಯಕ್ಕೆ ಮರಳುವ ನಿರೀಕ್ಷೆ ಇದೆ. ಅಲ್ಲದೆ ವಿಂಡೀಸ್ ಪಿಚ್ಗಳು ಅವರಿಗೆ ಪರಿಚಿತವೆನಿಸಿದೆ. ಕೆರಿಬಿಯನ್ ತಲುಪಿದ ಬಳಿಕ ಕೊಹ್ಲಿ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸವನ್ನೂ ನಡೆಸಿದ್ದಾರೆ. ಬೌಲಿಂಗ್ನಲ್ಲಿ ಯಶ ಕಂಡಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ನಲ್ಲೂ ಹಿಂದಿನ ಲಯಕ್ಕೆ ಮರಳಬೇಕಿದೆ.
ಸ್ಪಿನ್ ಸ್ನೇಹಿ ಪಿಚ್
ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್ ಪವರ್ಪ್ಲೇನಲ್ಲಿ ವೇಗಿಗಳ ಸ್ವಿಂಗ್ ಎಸೆತಗಳಿಗೆ ಸಹಕರಿಸಿದರೂ, ನಂತರದಲ್ಲಿ ಸ್ಪಿನ್ ಸ್ನೇಹಿಯಾಗಿ ವರ್ತಿಸುವ ನಿರೀಕ್ಷೆ ಇದೆ. ಹೀಗಾಗಿ ಕಳೆದ 12 ತಿಂಗಳಲ್ಲಿ ತಂಡದ ಅತ್ಯುತ್ತಮ ಸ್ಪಿನ್ನರ್ ಎನಿಸಿರುವ ಕುಲದೀಪ್ ಯಾದವ್ ಕಣಕ್ಕಿಳಿಸಲು ಸರಿಯಾದ ವೇದಿಕೆ ಇದಾಗಿದೆ. ಜತೆಗೆ ಬ್ಯಾಟರ್ಗಳಿಗೂ ವಿಂಡೀಸ್ ಪಿಚ್, ಅಮೆರಿಕದಷ್ಟು ಕಠಿಣವಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸೀಸ್ ಇಲ್ಲಿ 201 ರನ್ ಪೇರಿಸಿತ್ತು.
ಟೀಮ್ ನ್ಯೂಸ್:
ಭಾರತ: ಲೀಗ್ ಹಂತದ ಪಂದ್ಯಗಳನ್ನೆಲ್ಲ ಅಮೆರಿಕದಲ್ಲಿ ಆಡಿದ್ದ ಭಾರತ ಈಗ ವಿಂಡೀಸ್ ನೆಲದಲ್ಲಿ ಸೂಪರ್-8 ಪಂದ್ಯಗಳನ್ನು ಆಡಲಿದ್ದು, ತಂಡ ಸಂಯೋಜನೆ ಬದಲಾವಣೆ ಕಾಣುವ ನಿರೀಕ್ಷೆ ಹೆಚ್ಚಿದೆ. 3ನೇ ವೇಗಿಯ ಬದಲಿಗೆ ತಜ್ಞ ಸ್ಪಿನ್ನರ್ ಕುಲದೀಪ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾಗಿ ಮೊಹಮದ್ ಹೊರಗುಳಿಯಬಹುದು. ಎಲ್ಲ ನಾಲ್ವರು ಆಲ್ರೌಂಡರ್ಗಳನ್ನು (ಹಾರ್ದಿಕ್, ದುಬೆ, ಅಕ್ಷರ್, ಜಡೇಜಾ) 11ರ ಬಳಗದಲ್ಲಿ ಆಡಿಸುವ ಬಗ್ಗೆ ನಾಯಕ ರೋಹಿತ್ ಶರ್ಮ ಟೂರ್ನಿಗೆ ಮೊದಲೇ ಹೇಳಿಕೊಂಡಿದ್ದರು ಮತ್ತು ಸೂಪರ್-8ನಲ್ಲೂ ಈ ತಂತ್ರ ಮುಂದುವರಿಯಬಹುದು. ಇದರಿಂದ ಭಾರತದ ಬ್ಯಾಟಿಂಗ್ ವಿಭಾಗ 8ನೇ ಕ್ರಮಾಂಕದವರೆಗೂ ವಿಸ್ತರಣೆಯಾಗಲಿದೆ.
ಅಫ್ಘಾನಿಸ್ತಾನ: ಎಡಗೈ ವೇಗಿ ಜಲ್ಲಾಕ್ ಫಾರೂಖಿ 12 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯ ಗರಿಷ್ಠ ವಿಕೆಟ್ ಸಾಧಕ ಎನಿಸಿದ್ದು, ಪವರ್ಪ್ಲೇನಲ್ಲಿ ಆಫ್ಘನ್ಗೆ ಹಲವು ವಿಕೆಟ್ ಕಬಳಿಸಿಕೊಟ್ಟಿದ್ದಾರೆ. ಜತೆಗೆ ನಾಯಕ ರಶೀದ್ ಖಾನ್ ಸ್ಪಿನ್ ವಿಭಾಗದ ಸಾರಥ್ಯ ವಹಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾದ ರಹಮಾನುಲ್ಲಾ ಗುರ್ಬಜ್ ಮತ್ತು ಇಬ್ರಾಹಿಂ ಜದ್ರಾನ್ ಆಫ್ಘನ್ ಪಾಲಿಗೆ ನಿರ್ಣಾಯಕ ಎನಿಸಿದ್ದಾರೆ.
ಮುಖಾಮುಖಿ: 8
ಭಾರತ: 7
ಅ್ಘಾನಿಸ್ತಾನ: 0
ರದ್ದು: 1
ಆರಂಭ: ರಾತ್ರಿ 8.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ಸ್ಟಾರ್
ಪಂತ್ ಅಭ್ಯಾಸಕ್ಕೆ ಗೈರು!
ಆ್ಘನ್ ವಿರುದ್ಧದ ಪಂದ್ಯಕ್ಕೆ ಪೂರ್ವಭಾವಿಯಾಗಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಬುಧವಾರ ಭಾರತ ತಂಡದ ಅಭ್ಯಾಸಕ್ಕೆ ಗೈರಾದರು. ಇದಕ್ಕೆ ಗಾಯದ ಸಮಸ್ಯೆ ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ತಂಡದ ಉಳಿದೆಲ್ಲ ಆಟಗಾರರ ಹಾಜರಿಯ ನಡುವೆ ಪಂತ್ ಗೈರು ಅಚ್ಚರಿಗೂ ಕಾರಣವಾಗಿದೆ.