ಬೆಂಗಳೂರು: ಏಷ್ಯಾಡ್ ಗಾಲ್ಪ್ ನಲ್ಲಿ ಸ್ವರ್ಣ ಪದಕ ವಿಜೇತರಾದ ಪ್ರಣತಿ ಅರಸ್, ಬೆಳ್ಳಿ ಪದಕ ವಿಜೇತರಾದ ಅದಿತಿ ಅಶೋಕ್ ಹಾಗೂ ಸ್ವರ್ಣ ಪದಕ ವಿಜೇತ ಭಾರತ ಪುರುಷರ ಹಾಕಿ ತಂಡದ ಸದಸ್ಯರಾದ ಎಚ್.ಎಸ್. ಮೋಹಿತ್ ಅವರನ್ನು ಫಿಬಾ ಏಷ್ಯಾ ಅಧ್ಯಕ್ಷರು, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜ್ ಅಭಿನಂದನೆ ಸಲ್ಲಿಸಿದ್ದಾರೆ.
4 ಸ್ವರ್ಣ ಪದಕಗಳು ಸೇರಿದಂತೆ ಒಟ್ಟು10 ಪದಕಗಳನ್ನು ಕರ್ನಾಟಕದ ಕ್ರೀಡಾಪಟುಗಳು ಜಯಿಸಿದ್ದು, ರಾಜ್ಯ ಕ್ರೀಡಾಪಟುಗಳ ಸಾಧನೆ ನಿಜಕ್ಕೂ ಶ್ಲಾಘನೀಯ, ಇದು ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.
ಪುರುಷರ ಹಾಕಿ, ಕ್ರಿಕೆಟ್ ತಂಡಗಳಿಗೆ ಶ್ಲಾಘನೆ: ಸತತ ಎರಡನೇ ಬಾರಿಗೆ ಚಿನ್ನದ ಪದಕ ಜಯಿಸಿದ ಭಾರತ ಕ್ರಿಕೆಟ್ ತಂಡ ಹಾಗೂ ಹಾಕಿ ತಂಡಗಳಿಗೆ ಡಾ.ಕೆ.ಗೋವಿಂದರಾಜ್ ಅಭಿನಂದನೆ ಸಲ್ಲಿಸಿದ್ದಾರೆ.
ಶೀಘ್ರವೇ ಪದಕ ವಿಜೇತರಿಗೆ ಸನ್ಮಾನ: ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳನ್ನು ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಶೀಘ್ರವೇ ಸನ್ಮಾನಿಸಲಾಗುವುದು. ಪದಕ ವಿಜೇತರ ಹಿಂದಿನ ಶಕ್ತಿ ಕೋಚ್ ಗಳು. ಅವರ ಸತತ ಪರಿಶ್ರಮ ನಮ್ಮಕಣ್ಣಿಗೆ ಕಾಣುವುದಿಲ್ಲ. ಆದರೆ, ಆಟದ, ಆಟಗಾರರ ಸಾಧನೆಯ ಹಿಂದೆ ಇವರ ಕೊಡುಗೆ ಅಪಾರ. ತೆರೆಯ ಹಿಂದಿನ ಹೀರೋಗಳು. ಹಾಗಾಗಿ, ಪದಕ ವಿಜೇತ ಕಬಡ್ಡಿ ತಂಡಗಳ ಕೋಚ್ ಗಳಾದ ಬಿ.ಸಿ.ರಮೇಶ್, ಮಮತಾ ಪೂಜಾರಿ, ಬಾಕ್ಸಿಂಗ್ ಕೋಚ್ ಕುಟ್ಟಪ್ಪ ಅವರನ್ನು ಅಭಿನಂದಿಸಲಾಗುವುದು. ಈ ಕೋಚ್ ಗಳು ಕರ್ನಾಟಕ ಕ್ರೀಡಾ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಇವರ ಕೊಡುಗೆಯನ್ನು ಪರಿಗಣಿಸಿ ಗೌರವಿಸಲಾಗುವುದು' ಎಂದು ಡಾ.ಕೆ.ಗೋವಿಂದರಾಜ್ ತಿಳಿಸಿದ್ದಾರೆ.