ಬೆಂಗಳೂರು: ಏಷ್ಯಾಕಪ್ ಏಕದಿನ ಟೂರ್ನಿಗೆ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಯ್ಕೆಯಾಗಿರುವ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕ 2 ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಶ್ರೀಲಂಕಾ ನಿರ್ಗಮನಕ್ಕೂ ಮುನ್ನ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಲಭ್ಯತೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಸೆ.2ಕ್ಕೆ ಪಾಕಿಸ್ತಾನ ಹಾಗೂ ಸೆ.4ಕ್ಕೆ ನೇಪಾಳ ವಿರುದ್ಧದ ಪಂದ್ಯದಿಂದ ರಾಹುಲ್ ಹೊರಗುಳಿಯಲಿದ್ದಾರೆ ಎಂದು ಖಚಿತಪಡಿಸಿದರು.
ಆಲೂರು ಮೈದಾನದಲ್ಲಿ ನಡೆದ ಆರು ದಿನಗಳ ತರಬೇತಿ ಶಿಬಿರದಲ್ಲಿ ರಾಹುಲ್ ಉತ್ತಮವಾಗಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಿರ್ವಹಿಸಿದ್ದಾರೆ. ಆದರೆ, ಶಸ ಚಿಕಿತ್ಸೆಗೆ ಹೊರತಾದ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿದೆ. ಆದರೆ 10 ದಿನಗಳ ನಂತರ ನಡೆಯಲಿರುವ ಸೂಪರ್-4 ಹಂತದ ಪಂದ್ಯಗಳಿಗೆ ತಂಡಕ್ಕೆ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದರು. ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ತಂಡದೊಂದಿಗೆ ಲಂಕಾ ಪ್ರಯಾಣ ಬೆಳೆಸಲಿದ್ದಾರೆ. ಕೆಎಲ್ ರಾಹುಲ್ ಬೆಂಗಳೂರಿನ ಎನ್‌ಸಿಎಯಲ್ಲಿ ಉಳಿಯಲಿದ್ದು, ಇನ್ನೂ ಕೆಲ ದಿನಗಳ ವಿಶ್ರಾಂತಿ ಅಗತ್ಯವಿದೆ. ರಾಹುಲ್ ಫಿಟ್ನೆಸ್ ಬಗ್ಗೆ ನಿಗಾ ವಹಿಸಿರುವ ಎನ್‌ಸಿಎಯ ವೈದ್ಯಕೀಯ ಸಿಬ್ಬಂದಿ ಸೆ.4ರ ಬಳಿಕ ಅವರ ಪ್ರಯಾಣದ ಬಗ್ಗೆ ನಿರ್ಧರಿಸಲಿದ್ದಾರೆ.
ರಾಹುಲ್ ಗೈರಿನಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ನಿರ್ವಹಿಸುವ ನಿರೀಕ್ಷೆ ಇದೆ. ಏಷ್ಯಾಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಸಂಪೂರ್ಣವಾಗಿ ರಾಹುಲ್ ಫಿಟ್ ಆಗಿ ತಂಡದ ಸೇವೆಗೆ ಲಭ್ಯವಾಗುವ ವಿಶ್ವಾಸವಿದೆ ಎಂದರು. ವಿಶ್ವಕಪ್‌ಗೆ ಟೀಮ್ ಇಂಡಿಯಾ ಆಟಗಾರರ ಆಯ್ಕೆ ಮಾಡಲು ಮಂಗಳವಾರ (ಸೆ.5) ಅಂತಿಮ ದಿನವಾಗಿದೆ. ಬಳಿಕ ಕೆಲ ಬದಲಾವಣೆಗೂ ಅವಕಾಶವಿದೆ.