England vs India : ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಕೆಎಲ್ ರಾಹುಲ್ ಭಾರತ ಪರ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಿದಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಕೆಎಲ್ ರಾಹುಲ್ ಅವರ ಎರಡನೇ ಶತಕ ಇದಾಗಿದೆ. ಈ ಮೈದಾನದಲ್ಲಿ ಅತೀ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು, ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅದ್ಭುತ ಶತಕ ಗಳಿಸಿದ್ದರು. ಅಲ್ಲಿ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 247 ಎಸೆತಗಳಲ್ಲಿ 137 ರನ್ ಗಳಿಸಿದ್ದರು. ಇದೀಗ ಲಾರ್ಡ್ಸ್‌ನಲ್ಲಿನ ಶತಕದೊಂದಿಗೆ, ಅವರು ಈ ಮೈದಾನದಲ್ಲಿ 2 ಟೆಸ್ಟ್ ಶತಕಗಳನ್ನು ಗಳಿಸಿದ ಮೊದಲ ಏಷ್ಯನ್ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ರಾಹುಲ್ 2021 ರಲ್ಲಿ ಈ ಮೈದಾನದಲ್ಲಿ ಶತಕ ಗಳಿಸಿದ್ದರು. ಅಲ್ಲಿ ಅವರು 129 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
(ಏಜೆನ್ಸೀಸ್)
ಇಲ್ಲಿಯವರೆಗೆ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಪರ 10 ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದ್ದಾರೆ. ವಿನೂ ಮಂಕಡ್ ಲಾರ್ಡ್ಸ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ನಂತರ, ದಿಲೀಪ್ ವೆಂಗ್‌ಸರ್ಕಾರ್, ಕುಂದಪ್ಪ ವಿಶ್ವನಾಥ್, ರವಿಶಾಸ್ತ್ರಿ, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಅಜಿತ್ ಅಗರ್ಕರ್, ರಾಹುಲ್ ದ್ರಾವಿಡ್, ಅಜಿಂಕ್ಯ ರಹಾನೆ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿದ್ದಾರೆ.