ಬೆಂಗಳೂರು: ಯಾವುದೇ ಟೂರ್ನಿ ಇರಲಿ, ಅದರಲ್ಲೂ ಐಪಿಎಲ್ನಂಥ ಸುದೀರ್ ಟೂರ್ನಿಯಲ್ಲಿ ಆರಂಭದಿಂದ ಕೊನೆಯವರೆಗೂ ಪ್ರಾಬಲ್ಯ ಸಾಧಿಸುವುದು ಸುಲಭವಲ್ಲ. ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಆರಂಭ ಕಂಡರೂ ನಂತರ ಲಯ ತಪ್ಪಿತು. ಆರ್ಸಿಬಿ ತಂಡ ಆರಂಭದಲ್ಲಿ ಮುಗ್ಗರಿಸಿದರೂ ನಂತರ ಲಯ ಕಂಡುಕೊಂಡಿತು. ಸನ್ರೈಸರ್ಸ್ ಆರಂಭಿಕರು ಮಿಂಚಿದಾಗ ಮಾತ್ರ ಗೆದ್ದಿತು. ಸಿಎಸ್ಕೆ, ಲಖನೌ, ಡೆಲ್ಲಿ ತಂಡಗಳು ಅಸ್ಥಿರ ನಿರ್ವಹಣೆ ತೋರಿದವು. ಮುಂಬೈ, ಪಂಜಾಬ್ ತಂಡಗಳು ಟೂರ್ನಿಯುದ್ದಕ್ಕೂ ಲಯ ಕಂಡುಕೊಳ್ಳಲೇ ಇಲ್ಲ. ಆದರೆ ಮೊದಲ ಪಂದ್ಯದಿಂದ ಫೈನಲ್ವರೆಗೂ ಬಲಿಷ್ಠ ನಿರ್ವಹಣೆ ತೋರಿದ ಏಕೈಕ ತಂಡ ಕೋಲ್ಕತ ನೈಟ್ರೈಡರ್ಸ್. ಹೀಗಾಗಿಯೇ ಕೆಕೆಆರ್ ಭಾನುವಾರ ಚೆನ್ನೈನಲ್ಲಿ 3ನೇ ಬಾರಿ ಮತ್ತು 10 ವರ್ಷಗಳ ಬಳಿಕ ಪ್ರಶಸ್ತಿ ಎತ್ತಿ ಹಿಡಿದಾಗ ಗೆಲುವಿಗೆ ಅರ್ಹ ತಂಡವೆಂದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಇದು ಇಂಡಿಯನ್ ಪವರ್: ಐಪಿಎಲ್ ತಂಡಗಳ ತರಬೇತಿ ಬಳಗದಲ್ಲಿ ಯಾವಾಗಲೂ ವಿದೇಶಿಯರಿಗೆ ಹೆಚ್ಚಿನ ಮಣೆ ಹಾಕಲಾಗುತ್ತದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಪ್ರಶಸ್ತಿ ಗೆಲ್ಲುವವರೆಗೆ ಭಾರತೀಯರು ಕೋಚ್ ಆಗಿರುವ ಯಾವ ತಂಡವೂ ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ. ಆಶಿಶ್ ನೆಹ್ರಾ ಐಪಿಎಲ್ ಟ್ರೋಫಿ ಗೆದ್ದ ಮೊದಲ ಭಾರತೀಯ ಕೋಚ್ ಎನಿಸಿದ್ದರು. ಇದೀಗ ದೇಶೀಯ ಕೋಚಿಂಗ್ ದಿಗ್ಗಜ ಚಂದ್ರಕಾಂತ್ ಪಂಡಿತ್ ಕೆಕೆಆರ್ ಮುಖ್ಯ ಕೋಚ್ ಆಗಿ ಈ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಮುಂಬೈ, ವಿದರ್ಭ, ಮಧ್ಯಪ್ರದೇಶ ತಂಡಗಳ ಕೋಚ್ ಆಗಿ ರಣಜಿ ಟ್ರೋಫಿ ಗೆದ್ದಿರುವ ಹೆಗ್ಗಳಿಕೆ ಚಂದ್ರಕಾಂತ್ ಪಂಡಿತ್ರದ್ದು. ಇದೀಗ ಐಪಿಎಲ್&ರಣಜಿ ಟ್ರೋಫಿ ಎರಡನ್ನೂ ಗೆದ್ದ ಮೊದಲ ಕೋಚ್ ಎನಿಸಿದ್ದಾರೆ. ಇನ್ನು ಮೆಂಟರ್ ಆಗಿ ಮರಳಿದ ಬಳಿಕ ಗೌತಮ್ ಗಂಭೀರ್ ಕೆಕೆಆರ್ ತಂಡದಲ್ಲಿ ಮಾಡಿರುವ ಇಂಪ್ಯಾಕ್ಟ್ ಕೂಡ ಬಲು ದೊಡ್ಡದು. ಜತೆಗೆ ಸಹಾಯಕ ಕೋಚ್ ಆಗಿ ಅಭಿಷೇಕ್ ನಾಯರ್ ಮತ್ತು ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಮಾಡಿರುವ ಮೋಡಿಯೂ ಪ್ರಮುಖವಾದುದು. ಪ್ರತಿಭಾನ್ವಿತ ದೇಶೀಯ ಕ್ರಿಕೆಟಿಗರನ್ನು ತಂಡಕ್ಕೆ ಹುಡುಕಿ ತಂದು ಅವರನ್ನು ಬೆಳೆಸುವಲ್ಲಿ ಅಭಿಷೇಕ್ ಮಹತ್ವದ ಪಾತ್ರ ವಹಿಸಿದ್ದರೆ, ಭರತ್ ಅರುಣ್ ಬಲಿಷ್ಠ ಬೌಲಿಂಗ್ ವಿಭಾಗ ರೂಪಿಸಿದರು. ಇದರೊಂದಿಗೆ ಕೆಕೆಆರ್ ಮೈದಾನದಲ್ಲಿ ಕಂಡ ಯಶಸ್ಸಿನಲ್ಲಿ ದೇಶೀಯ ಆಟಗಾರರಾದ ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವೈಭವ್ ಅರೋರ, ರಮಣ್ದೀಪ್ ಸಿಂಗ್ ಕೊಡುಗೆಯೂ ನಿರ್ಣಾಯಕವೆನಿಸಿದೆ.
ಫೈನಲ್ ಪಂದ್ಯದ ಟರ್ನಿಂಗ್ ಪಾಯಿಂಟ್
ಗರಿಷ್ಠ ಮೊತ್ತ, ಪವರ್ಪ್ಲೇನಲ್ಲಿ ಗರಿಷ್ಠ ರನ್, 10 ಓವರ್ನೊಳಗೆ 150 ಪ್ಲಸ್ ಮೊತ್ತದ ಚೇಸಿಂಗ್ ಮೂಲಕ ಎದುರಾಳಿ ತಂಡದ ಬೌಲರ್ಗಳಿಗೆ ಸನ್ರೈಸರ್ಸ್ ತಂಡದ ಆರಂಭಿಕ ಜೋಡಿ ಭೀತಿ ಮೂಡಿಸಿತ್ತು. ಆದರೆ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ನಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ ಇಬ್ಬರನ್ನೂ ಬೇಗನೆ ಔಟ್ ಮಾಡುವ ಮೂಲಕ ಕೆಕೆಆರ್ ಯಶ ಸಾಧಿಸಿತು. ಕ್ವಾಲಿಫೈಯರ್ನಲ್ಲಿ ಮೊದಲ ಓವರ್ನಲ್ಲೇ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆಗಿದ್ದ ಹೆಡ್, ಫೈನಲ್ನಲ್ಲಿ ಸ್ಟಾರ್ಕ್ ಜತೆಗಿನ ಮುಖಾಮುಖಿ ತಪ್ಪಿಸಲು ಅಭಿಷೇಕ್ ಶರ್ಮಗೆ ಸ್ಟ್ರೆ$ಕ್ ಬಿಟ್ಟುಕೊಟ್ಟರು. ಆದರೆ ಸನ್ಗೆ ಈ ತಂತ್ರವೂ ಲ ನೀಡಲಿಲ್ಲ. ಅಭಿಷೇಕ್ ಮೊದಲ ಓವರ್ನಲ್ಲೇ ಸ್ಟಾರ್ಕ್ಗೆ ವಿಕೆಟ್ ನೀಡಿದರೆ, ಟ್ರಾವಿಸ್ ಹೆಡ್ ಮರುಓವರ್ನಲ್ಲಿ ವೈಭವ್ ಅರೋರಗೆ ವಿಕೆಟ್ ನೀಡಿದರು. ಇದರಿಂದ ಮೊದಲ 2 ಓವರ್ಗಳಲ್ಲೇ ಪಂದ್ಯ ಸಂಪೂರ್ಣವಾಗಿ ಕೆಕೆಆರ್ ಕಡೆ ತಿರುಗಿತು.
ನಾರಾಯಣ್ ಆರಂಭಿಕನಾಗಿ ಯಶ
ಗೌತಮ್ ಗಂಭೀರ್ ಮೆಂಟರ್ ಆಗಿ ಮರಳಿದ ಬೆನ್ನಲ್ಲೇ ಸುನೀಲ್ ನಾರಾಯಣ್ಗೆ ಆರಂಭಿಕರಾಗಿ ಮತ್ತೆ ಬಡ್ತಿ ನೀಡಿದ್ದು ಕೂಡ ಕೆಕೆಆರ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. 2017ರಲ್ಲಿ ಗಂಭೀರ್ ನಾಯಕರಾಗಿದ್ದಾಗಲೇ ನಾರಾಯಣ್ ಮೊದಲ ಬಾರಿ ಆರಂಭಿಕರಾಗಿ ಯಶ ಕಂಡಿದ್ದರು. ನಂತರ ಗಂಭೀರ್ ತಂಡದಿಂದ ನಿರ್ಗಮಿಸಿದ ಬೆನ್ನಲ್ಲೇ ನಾರಾಯಣ್ ಮತ್ತೆ ತಂಡದಲ್ಲಿ ಸ್ಪಿನ್ನರ್ ಮಾತ್ರ ಆಗಿ ಉಳಿದಿದ್ದರು. ಪಿಂಚ್ ಹಿಟ್ಟರ್ ರೂಪದಲ್ಲಿ ನಾರಾಯಣ್ ಆರಂಭಿಕರಾಗಿ ಗಳಿಸಿದ ಪ್ರತಿ ರನ್ ಕೂಡ ಕೆಕೆಆರ್ಗೆ ಬೋನಸ್ ರೂಪದಲ್ಲಿ ನೆರವಾಯಿತು. 17 ವಿಕೆಟ್ ಮತ್ತು 488 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೂ ಅವರು ಪಾತ್ರರಾದರು. ಸುನೀಲ್ ನಾರಾಯಣ್ ಐಪಿಎಲ್ನಲ್ಲಿ 3 ಬಾರಿ (2012, 2018, 2024) ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮೊದಲಿಗರೆನಿಸಿದರು. ಶೇನ್ ವ್ಯಾಟ್ಸನ್, ಆಂಡ್ರೆ ರಸೆಲ್ ತಲಾ 2 ಬಾರಿ ಸರಣಿಶ್ರೇಷ್ಠರಾಗಿದ್ದು ಹಿಂದಿನ ದಾಖಲೆ.
ವೈವಿಧ್ಯತೆಯ ಬೌಲಿಂಗ್ ವಿಭಾಗ
ಬಲಿಷ್ಠ ಬ್ಯಾಟಿಂಗ್ ವಿಭಾಗವಿದ್ದರೆ ಪಂದ್ಯ ಗೆಲ್ಲಬಹುದು, ಬಲಿಷ್ಠ ಬೌಲಿಂಗ್ ವಿಭಾಗವಿದ್ದರೆ ಟೂರ್ನಿಯನ್ನೇ ಗೆಲ್ಲಬಹುದು ಎಂಬ ಮಾತನ್ನು ಕೆಕೆಆರ್ ಅಕ್ಷರಶ@ ನಿಜವಾಗಿಸಿತು. ಎಡಗೈ&ಬಲಗೈ, ಸ್ಪಿನ್&ಸ್ಪೀಡ್ ವಿಭಾಗದಲ್ಲಿ ವೈವಿಧ್ಯತೆಯ ಬೌಲಿಂಗ್ ವಿಭಾಗ ಕೆಕೆಆರ್ಗೆ ಬಲಿಷ್ಠ ಶಕ್ತಿ ನೀಡಿತು. 5 ಬೌಲರ್ಗಳು 17 ಅಥವಾ ಅದಕ್ಕಿಂತ ಅಧಿಕ ವಿಕೆಟ್ ಕಬಳಿಸಿದ್ದೇ ಇದಕ್ಕೆ ಸಾ. ವರುಣ್ ಚಕ್ರವರ್ತಿ (21), ಹರ್ಷಿತ್ ರಾಣಾ (19), ಆಂಡ್ರೆ ರಸೆಲ್ (19), ಸುನೀಲ್ ನಾರಾಯಣ್ (17), ಮಿಚೆಲ್ ಸ್ಟಾರ್ಕ್ (17) ಜತೆಗೆ 6ನೇ ಬೌಲರ್ ವೈಭವ್ ಅರೋರ (11) ಕೂಡ ಕೆಲ ಮಹತ್ವ ವಿಕೆಟ್ ಕಬಳಿಸಿದರು.
ಹರಾಜಿನಿಂದಲೇ ಗೇಮ್ ಪ್ಲ್ಯಾನ್
ಐಪಿಎಲ್ನಲ್ಲಿ ಅಸಲಿ ಆಟ ಹರಾಜು ಟೇಬಲ್ನಿಂದಲೇ ಶುರುವಾಗುತ್ತದೆ ಎಂಬುದನ್ನು ಕೆಕೆಆರ್ ನಿರೂಪಿಸಿತು. ಮಿಚೆಲ್ ಸ್ಟಾರ್ಕ್ಗೆ ದಾಖಲೆಯ 24.75 ಕೋಟಿ ರೂ. ನೀಡಿದ ಕೆಕೆಆರ್ ನಡೆ ಟೀಕೆ ಮತ್ತು ಟ್ರೋಲ್ಗೆ ಒಳಗಾಗಿತ್ತು. ಆದರೆ ಇದು ಎಷ್ಟು ದಿಟ್ಟ ಹೆಜ್ಜೆ ಎಂಬುದು ಮಿಚೆಲ್ ಸ್ಟಾರ್ಕ್ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ನಲ್ಲಿ ಮಾರಕ ದಾಳಿ ಸಂಟಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದಾಗ ಸಾಬೀತಾಯಿತು.