ಕ್ರೀಡೆ

ಬುಮ್ರಾ ಸಾಹಸ ವ್ಯರ್ಥ, ಮತ್ತೆ ಮುಗ್ಗರಿಸಿದ ಮುಂಬೈ; ಕೆಕೆಆರ್ ಪ್ಲೇಆಫ್​ ಕನಸು ಜೀವಂತ

ಮುಂಬೈ: ವೇಗಿ ಜಸ್‌ಪ್ರೀತ್ ಬುಮ್ರಾ (10ಕ್ಕೆ 5) ಪ್ರಚಂಡ ಬೌಲಿಂಗ್ ನಿರ್ವಹಣೆಯ ನಡುವೆಯೂ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-15ರಲ್ಲಿ ಮತ್ತೆ ಮುಗ್ಗರಿಸಿದೆ. ಮುಂಬೈಗೆ ವೇಗದ ಬೌಲಿಂಗ್ ದಾಳಿಯಿಂದಲೇ ತಿರುಗೇಟು ನೀಡಿದ ಕೋಲ್ಕತ ನೈಟ್‌ರೈಡರ್ಸ್‌ ತಂಡ 52 ರನ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಪಡೆ ತನ್ನ ಪಾಲಿಗೆ ಉಳಿದಿರುವ ಕೂದಲೆಳೆಯ ಪ್ಲೇಆಫ್​ ಆಸೆಯನ್ನು ಜೀವಂತವಿಟ್ಟಿದೆ. ಮತ್ತೊಂದೆಡೆ ರೋಹಿತ್ ಶರ್ಮ ಬಳಗ ಟೂರ್ನಿಯಲ್ಲಿ 9ನೇ ಸೋಲು ಕಂಡಿದ್ದು, 5 ಬಾರಿಯ ಚಾಂಪಿಯನ್ಸ್‌ಗೆ ಈ ಸಲ ಅಂಕಪಟ್ಟಿಯಲ್ಲಿ ಕೊನೇ ಸ್ಥಾನವೇ ಬಹುತೇಕ ಖಚಿತವೆನಿಸಿದೆ.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್, 14 ಓವರ್‌ಗಳಲ್ಲಿ 3 ವಿಕೆಟ್‌ಗೆ 136 ರನ್ ಗಳಿಸಿ 200 ಪ್ಲಸ್ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ ಬಳಿಕ ಬುಮ್ರಾ ನೀಡಿದ ಆಘಾತಕ್ಕೆ ದಿಢೀರ್ ಕುಸಿತ ಕಂಡು 9 ವಿಕೆಟ್‌ಗೆ 165 ರನ್‌ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಪ್ಯಾಟ್ ಕಮ್ಮಿನ್ಸ್ (22ಕ್ಕೆ 3) ಮತ್ತು ಆಂಡ್ರೆ ರಸೆಲ್ (22ಕ್ಕೆ 2) ದಾಳಿಗೆ ಕಂಗೆಟ್ಟ ಮುಂಬೈ ತಂಡ 17.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತು. ಇಶಾನ್ ಕಿಶನ್ (51ರನ್, 43 ಎಸೆತ, 5 ಬೌಂಡರಿ, 1 ಸಿಕ್ಸರ್) ಉತ್ತಮ ಆರಂಭ ಒದಗಿಸಿದರೂ, ಇತರ ಬ್ಯಾಟರ್‌ಗಳ ವೈಫಲ್ಯ ಮುಂಬೈ ಚೇಸಿಂಗ್‌ಗೆ ಅಡ್ಡಿಯಾಯಿತು. 13 ರನ್ ಅಂತರದಲ್ಲಿ ಮುಂಬೈ ಕೊನೇ 6 ವಿಕೆಟ್ ಕಳೆದುಕೊಂಡಿತು.

ವೆಂಕಟೇಶ್, ನಿತೀಶ್ ಉಪಯುಕ್ತ ಆಟ

ಆರಂಭಿಕರಾದ ವೆಂಕಟೇಶ್ ಅಯ್ಯರ್ (43) ಮತ್ತು ಅಜಿಂಕ್ಯ ರಹಾನೆ (25) ಮೊದಲ ವಿಕೆಟ್‌ಗೆ 60 ರನ್ ಪೇರಿಸುವ ಮೂಲಕ ಕೆಕೆಆರ್‌ಗೆ ಉತ್ತಮ ಬುನಾದಿ ಹಾಕಿಕೊಟ್ಟಿದ್ದರು. ಬಳಿಕ ವನ್‌ಡೌನ್ ಬ್ಯಾಟರ್ ನಿತೀಶ್ ರಾಣಾ (43) ಕೂಡ ಕೆಲಕಾಲ ಆಸರೆಯಾದರು. ಆದರೆ ಕೊನೇ 6 ಓವರ್‌ಗಳಲ್ಲಿ ಕೆಕೆಆರ್ 29 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತತ್ತರಿಸಿತು.

ಬುಮ್ರಾ 9 ಎಸೆತಗಳಲ್ಲಿ 5 ವಿಕೆಟ್ ಬೇಟೆ!

ಜಸ್‌ಪ್ರೀತ್ ಬುಮ್ರಾ 9 ಎಸೆತಗಳ ಅಂತರದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ತಂಡದ ನಾಟಕೀಯ ಕುಸಿತಕ್ಕೆ ಕಾರಣರಾದರು. ಪಂದ್ಯದ 15ನೇ ಓವರ್‌ನ 2ನೇ ಎಸೆತದಲ್ಲಿ ಆಂಡ್ರೆ ರಸೆಲ್ (9) ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ವಿಕೆಟ್ ಬೇಟೆ ಆರಂಭಿಸಿದರು. ಆ ಓವರ್‌ನ 5ನೇ ಎಸೆತದಲ್ಲಿ ನಿತೀಶ್ ರಾಣಾ ವಿಕೆಟ್ ಕಬಳಿಸಿದರು. 18ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಬುಮ್ರಾ 3 ವಿಕೆಟ್ ಪಡೆದರು. ಆ ಓವರ್‌ನ 1, 3, 4ನೇ ಎಸೆತಗಳಲ್ಲಿ ಕ್ರಮವಾಗಿ ಶೆಲ್ಡನ್ ಜಾಕ್ಸನ್ (5), ಪ್ಯಾಟ್ ಕಮ್ಮಿನ್ಸ್ (0) ಮತ್ತು ಸುನೀಲ್ ನಾರಾಯಣ್ (0) ವಿಕೆಟ್ ಕಿತ್ತರು. ಬಳಿಕ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಬುಮ್ರಾ ಕೇವಲ 1 ರನ್ ಬಿಟ್ಟುಕೊಟ್ಟರು.