ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್ಗೂ ಮುನ್ನ ಕೋಲ್ಕತ ನೈಟ್ ರೈಡರ್ಸ್ ( KKR ) ತಂಡ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೇನೆಂದರೆ, ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರನ್ನು ತಮ್ಮ ತಂಡದ ಸಹಾಯಕ ಕೋಚ್ ಆಗಿ ಚಾಂಪಿಯನ್ ತಂಡ ನೇಮಕ ಮಾಡಿದೆ.
ಅಂದಹಾಗೆ, ವ್ಯಾಟ್ಸನ್ ಅವರು ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವೇಗಿ ಮತ್ತು ಉತ್ತಮ ಬ್ಯಾಟ್ಸಮನ್ ಕೂಡ. ಇವರು ಕೆಕೆಆರ್ ಮುಖ್ಯ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಕೆಕೆಆರ್ ತಂಡದ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದಾರೆ.
ಶೇನ್ ವ್ಯಾಟ್ಸನ್ ನೇಮಕಕ್ಕೆ ಕೆಕೆಆರ್ ಸಿಇಒ ವೆಂಕಿ ಮೈಸೂರು ಪ್ರತಿಕ್ರಿಯಿಸಿದ್ದಾರೆ. ವ್ಯಾಟ್ಸನ್ ಅವರನ್ನು ಕೆಕೆಆರ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗಿದೆ. ಆಟಗಾರನಾಗಿ ಮತ್ತು ತರಬೇತುದಾರರಾಗಿ ಅವರ ಅಗಾಧ ಅನುಭವವು ನಮ್ಮ ತಂಡಕ್ಕೆ ಅಪಾರ ಕೊಡುಗೆ ನೀಡಲಿದೆ. ಟಿ20 ಸ್ವರೂಪದ ಬಗ್ಗೆ ಅವರಿಗಿರುವ ತಿಳುವಳಿಕೆ ಮತ್ತು ಮೈದಾನದಲ್ಲಿ ಹಾಗೂ ಅದರಿಂದಾಚೆಗೆ ಅವರ ಕೊಡುಗೆಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ವೆಂಕಿ ಮೈಸೂರು ತಿಳಿಸಿದರು.
ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಕ್ಕೆ ಶೇನ್ ವ್ಯಾಟ್ಸನ್ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಕೋಲ್ಕತ ನೈಟ್ ರೈಡರ್ಸ್‌ನಂತಹ ಐಕಾನಿಕ್ ಫ್ರಾಂಚೈಸಿಯ ಭಾಗವಾಗುವುದು ನನಗೆ ದೊರೆತ ಒಂದು ದೊಡ್ಡ ಗೌರವ. ಕೆಕೆಆರ್ ಅಭಿಮಾನಿಗಳ ಉತ್ಸಾಹ ಮತ್ತು ಬದ್ಧತೆಯನ್ನು ನಾನು ಯಾವಾಗಲೂ ಮೆಚ್ಚುತ್ತೇನೆ. ಕೋಲ್ಕತಗೆ ಮತ್ತೊಂದು ಪ್ರಶಸ್ತಿಯನ್ನು ತರಲು ಕೋಚಿಂಗ್ ಗ್ರೂಪ್ ಮತ್ತು ತಂಡದ ಆಟಗಾರರೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ವ್ಯಾಟ್ಸನ್ ಹೇಳಿದ್ದಾರೆ. (ಏಜೆನ್ಸೀಸ್)