ಕ್ರೀಡೆ

ಕೋಲ್ಕತ ನೈಟ್​ರೈಡರ್ಸ್​ಗೆ ಶುಭಮಾನ್​ ಗಿಲ್​ ಭವಿಷ್ಯದ ನಾಯಕ?

ಕೋಲ್ಕತ: ಗೌತಮ್​ ಗಂಭೀರ್​ ಸಾರಥ್ಯದಲ್ಲಿ 2 ಬಾರಿ ಐಪಿಎಲ್​ ಪ್ರಶಸ್ತಿ ಗೆದ್ದುಕೊಂಡಿರುವ ಕೋಲ್ಕತ ನೈಟ್​ರೈಡರ್ಸ್ ತಂಡ ಅವರ ನಿರ್ಗಮನದ ಬಳಿಕ ಉತ್ತಮ ಯಶಸ್ಸನ್ನು ಕಂಡಿಲ್ಲ. ಕಳೆದ ವರ್ಷ ದಿನೇಶ್​ ಕಾರ್ತಿಕ್ ಸಾರಥ್ಯದಲ್ಲಿ ಆಡಿದ ತಂಡ ಸಾಧಾರಣ ಯಶಸ್ಸು ಕಂಡಿತ್ತು. ಇದೀಗ ಭವಿಷ್ಯದ ನಾಯಕನನ್ನು ರೂಪಿಸುವ ಕೆಲಸ ಆರಂಭಿಸಿರುವ ಕೆಕೆಆರ್​ ಫ್ರಾಂಚೈಸಿ, ಪಂಜಾಬ್​ನ ಯುವ ಬ್ಯಾಟ್ಸ್​​ಮನ್​ ಶುಭಮಾನ್​ ಗಿಲ್​ ಅವರನ್ನು ಈ ಪಾತ್ರಕ್ಕೆ ಆರಿಸಿದೆ.

ಶುಭಮಾನ್​ ಗಿಲ್​ ಮುಂಬರುವ ಐಪಿಎಲ್​ನಲ್ಲಿ ಕೆಲ ನಾಯಕತ್ವ ಪಾತ್ರಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ತಂಡದ ಕೋಚ್​ ಬ್ರೆಂಡನ್​ ಮೆಕ್ಕಲಂ ಬುಧವಾರ ತಿಳಿಸಿದ್ದಾರೆ. 20 ವರ್ಷದ ಗಿಲ್​ ಕಳೆದ ಐಪಿಎಲ್​ ಆವೃತ್ತಿ ಕೆಲ ಉತ್ತಮ ಇನಿಂಗ್ಸ್​ ಆಡುವ ಮೂಲಕ ಗಮನ ಸೆಳೆದಿದ್ದರು.

'ಶುಭಮಾನ್​ ಗಿಲ್​ ಪ್ರತಿಭಾನ್ವಿತ ಆಟಗಾರ. ಅವರು ಈ ವರ್ಷ ನಮ್ಮ ಲೀಡರ್​ಶಿಪ್​ ಗ್ರೂಪ್​ನ ಭಾಗವಾಗಿರುತ್ತಾರೆ. ಅವರು ಯುವ ಆಟಗಾರ. ಆದರೆ ನಾಯಕರಾಗಲು ದೀರ್ಘಕಾಲ ಆಡಿದ ಅನುಭವ ಬೇಕಾಗಿಲ್ಲ ಎಂದು ನಂಬಿದವನು ನಾನು. ಅವರಲ್ಲಿನ ನಾಯಕತ್ವ ಗುಣಗಳನ್ನು ನಾವು ಈಗಾಗಲೆ ಗುರುತಿಸಿದ್ದೇವೆ' ಎಂದು ನ್ಯೂಜಿಲೆಂಡ್​ನ ಮಾಜಿ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಹೇಳಿದ್ದಾರೆ.

ನಾಯಕ ದಿನೇಶ್​ ಕಾರ್ತಿಕ್ ಜತೆಗೆ ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​ ಮತ್ತು ಇಂಗ್ಲೆಂಡ್​ ನಾಯಕ ಇವೊಯಿನ್​ ಮಾರ್ಗನ್​ ಕೂಡ ಈ ಲೀಡರ್​ಶಿಪ್​ ಗ್ರೂಪ್​ನ ಭಾಗವಾಗಿರುತ್ತಾರೆ ಎಂದು ಮೆಕ್ಕಲಂ ಹೇಳಿದ್ದಾರೆ. ವ್ಯಕ್ತಿಯಾಗಿ ದಿನೇಶ್​ ಕಾರ್ತಿಕ್​ ಅವರನ್ನು ನಾನು ಇಷ್ಟಪಡುತ್ತೇನೆ. ನಾವು ತಂಡದಲ್ಲಿ ಅವರಿಗೆ ಉತ್ತಮ ಬೆಂಬಲವನ್ನು ಒದಗಿಸಬೇಕಾಗಿದೆ. ನಾಯಕತ್ವಕ್ಕೆ ಅವರು ಸಾಕಷ್ಟು ಪಕ್ವ ಆಗಿದ್ದಾರೆ ಎಂದು ಮೆಕ್ಕಲಂ ತಿಳಿಸಿದ್ದಾರೆ. ಇಂಗ್ಲೆಂಡ್​ ವಿಶ್ವಕಪ್​ ವಿಜೇತ ನಾಯಕ ಮಾರ್ಗನ್​ ಮೈದಾನದಲ್ಲಿ ಕಾರ್ತಿಕ್​ಗೆ ಉಪನಾಯಕರಾಗಿ ನೆರವಾಗಲಿದ್ದಾರೆ ಎಂದೂ ಅವರು ಹೇಳಿದ್ದಾರೆ.