ಕ್ರೀಡೆ

ಕೆಎಲ್ ರಾಹುಲ್ ಬಳಗಕ್ಕೆ ಇಂದು ಕೆಕೆಆರ್ ಸವಾಲು; ಮಾಡು ಇಲ್ಲವೆ ಮಡಿ ಒತ್ತಡದಲ್ಲಿ ಪಂಜಾಬ್

ದುಬೈ: ಪ್ಲೇಆ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಸವಾಲು ಎದುರಿಸಲಿದೆ. ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಈ ಪಂದ್ಯ ಇವೊಯಿನ್ ಮಾರ್ಗನ್ ಬಳಗಕ್ಕೂ ಮಹತ್ವದ್ದಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ತಂಡದ ಸ್ಥಿತಿ ಹಗ್ಗದ ಮೇಲಿನ ನಡಿಗೆಯಂತಿದ್ದು, ಗೆದ್ದರಷ್ಟೇ ಟೂರ್ನಿಯ ಮುಂದಿನ ಹಾದಿ ಜೀವಂತವಾಗಿರಲಿದೆ. ಸೋತರೆ ಟೂರ್ನಿಯಿಂದ ಹೊರಬಿದ್ದ ಎರಡನೇ ತಂಡ ಎನಿಸಿಕೊಳ್ಳಲಿದೆ. ಮತ್ತೊಂದೆಡೆ, ಅರಬ್‌ನಾಡಿನಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಪ್ಲೇಆಫ್ ರೇಸ್‌ನಲ್ಲಿ ಉಳಿದಿರುವ ಮಾರ್ಗನ್ ಪಡೆ ಕೂಡ ಗೆಲುವಿನ ಒತ್ತಡದಲ್ಲಿದೆ.

*ಪಂಜಾಬ್‌ಗೆ ಗೆದ್ದರಷ್ಟೇ ಉಳಿಗಾಲ

ಲೀಗ್‌ನಲ್ಲಿ ಈಗಾಗಲೇ ಸೋಲಿನ ಕೋಟಾ ಮುಗಿಸಿರುವ ಪಂಜಾಬ್ ತಂಡ ಇನ್ನು ಒಂದು ಪಂದ್ಯ ಸೋತರೂ ಅಧಿಕೃತವಾಗಿ ಲೀಗ್‌ನಿಂದ ಹೊರಬೀಳಲಿದೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಮುಂದಿನ ಹಾದಿ ಜೀವಂತವಾಗಿರಬೇಕಾದರೆ ಪಂಜಾಬ್ ಪಾಲಿಗೆ ಗೆಲುವೊಂದೇ ಮಂತ್ರವಾಗಿದೆ. ಒಂದು ವೇಳೆ ಉಳಿದ 3 ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್ ಹಂತಕ್ಕೇರಲು ಇತರ ಪಂದ್ಯಗಳ ಫಲಿತಾಂಶದ ಮೇಲೂ ಪಂಜಾಬ್ ತಂಡದ ಭವಿಷ್ಯ ಅಡಗಿದೆ. ಗೆದ್ದರೂ ಪಂಜಾಬ್ ಪಾಳಯದಲ್ಲಿ ಅನಿಶ್ಚಿತತೆಯ ಕಾರ್ಮೋಡ ಇರಲಿದೆ. ತಂಡದಿಂದ ಇದುವರೆಗೆ ಸಂಘಟಿತ ನಿರ್ವಹಣೆ ಕಂಡುಬರುತ್ತಿಲ್ಲ. ಕನ್ನಡಿಗರಾದ ಕೆಎಲ್ ರಾಹುಲ್ (422 ರನ್) ಹಾಗೂ ಮಯಾಂಕ್ ಅಗರ್ವಾಲ್ (332 ರನ್) ಹೊರತುಪಡಿಸಿ ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ನಿರ್ವಹಣೆ ನೀಡುತ್ತಿಲ್ಲ, ಟಿ20 ದೈತ್ಯ ಕ್ರಿಸ್ ಗೇಲ್ ಇದುವರೆಗೆ ಆಡಿರುವ 10 ಪಂದ್ಯಗಳಿಂದ 193 ರನ್ ಗಳಿಸಿದ್ದರೆ, ನಿಕೋಲಸ್ ಪೂರನ್ 10 ಪಂದ್ಯಗಳಿಂದ 70 ರನ್‌ಗಳಷ್ಟೇ ಗಳಿಸಿದ್ದಾರೆ. ಕುತ್ತಿಗೆ ನೋವಿನಿಂದ ಹಿಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಮಯಾಂಕ್ ಮರಳಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಸತತ ವಿಫಲರಾಗುತ್ತಿರುವ ದೀಪಕ್ ಹೂಡಾ ಬದಲಿಗೆ ತಮಿಳುನಾಡು ಆಲ್ರೌಂಡರ್ ಶಾರೂಖ್ ಖಾನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಶಮಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯಿ ಗಮನಸೆಳೆಯುತ್ತಿದ್ದಾರೆ.

*ಕೆಕೆಆರ್‌ಗೆ ಗೆಲುವಿನ ಕಾತರ

ಭಾರತದಲ್ಲಿ ನಡೆದ ಮೊದಲ ಚರಣದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ಕೆಕೆಆರ್ ತಂಡ ಅರಬ್ ನಾಡಿನಲ್ಲಿ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಜಯ, 6 ಸೋಲು ಕಂಡಿರುವ ಕೆಕೆಆರ್, 10 ಅಂಕ ಕಲೆಹಾಕಿದೆ. ಉಳಿದ 3 ಪಂದ್ಯಗಳೂ ತಂಡದ ಪಾಲಿಗೆ ಭಾರಿ ಮಹತ್ವ ಪಡೆದಿದೆ. ಕನಿಷ್ಠ ಒಂದು ಪಂದ್ಯದಲ್ಲಿ ಸೋತರೂ ಪ್ಲೇಆಫ್ ಹಾದಿ ದುರ್ಗಮವಾಗಲಿದೆ. ಹೀಗಾಗಿ ಕೆಕೆಆರ್ ತಂಡಕ್ಕೆ ಎಚ್ಚರಿಕೆಯ ನಿರ್ವಹಣೆ ಆಗತ್ಯವಿದೆ. ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ ಅವರಂಥ ಯುವ ಬ್ಯಾಟ್ಸ್‌ಮನ್‌ಗಳು ಲಯದಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಬೌಲಿಂಗ್‌ನಲ್ಲಿ ಲಾಕಿ ಫರ್ಗ್ಯುಸನ್, ಸುನೀಲ್ ನಾರಾಯಣ್ ಗಮನಸೆಳೆಯುತ್ತಿದ್ದಾರೆ.

ಟೀಮ್ ನ್ಯೂಸ್:

*ಕೆಕೆಆರ್: ಫಿಟ್ನೆಸ್ ಸಮಸ್ಯೆಯಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಆಲ್ರೌಂಡರ್ ಆಂಡ್ರೆ ರಸೆಲ್ ಫಿಟ್ ಆಗಿ ಮರಳಿದರೆ, ಟಿಮ್ ಸೌಥಿ ಮತ್ತೆ ಹೊರಗುಳಿಯಲಿದ್ದಾರೆ.

* ಪಂಜಾಬ್ ಕಿಂಗ್ಸ್: ಕುತ್ತಿಗೆ ನೋವಿನಿಂದ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಮಯಾಂಕ್ ಅಗರ್ವಾಲ್ ವಾಪಸಾಗಬಹುದು. ಆಗ ಮಂದೀಪ್ ಸಿಂಗ್ ಹೊರಗುಳಿಯಲಿದ್ದಾರೆ. ಟೂರ್ನಿಯ ಮೊದಲ ಚರಣದಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಮಿಂಚಿದ್ದ ಶಾರುಖ್ ಖಾನ್‌ಗೆ ಅವಕಾಶ ನೀಡಿದರೆ, ಸತತ ವಿಫಲರಾಗುತ್ತಿರುವ ದೀಪಕ್ ಹೂಡಾ ಅವರನ್ನು ಕೈಬಿಡಬಹುದು.

ಮುಖಾಮುಖಿ: 28

ಪಂಜಾಬ್ ಕಿಂಗ್ಸ್: 9

ಕೆಕೆಆರ್: 19

ಹಿಂದಿನ ಹಣಾಹಣಿ: ಅಹಮದಾಬಾದ್‌ನಲ್ಲಿ ಕೆಕೆಆರ್‌ಗೆ 5 ವಿಕೆಟ್ ಜಯ

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್