ಕ್ರೀಡೆ

ಇಂದು ಕ್ಯಾಪಿಟಲ್ಸ್-ಕೆಕೆಆರ್ ಕಾದಾಟ, ಶಾರ್ಜಾದಲ್ಲಿ ಮತ್ತೆ ಸಿಕ್ಸರ್ ಸುರಿಮಳೆ ನಿರೀಕ್ಷೆ

ಶಾರ್ಜಾ: ಟೂರ್ನಿಯಲ್ಲಿ ಇದುವರೆಗೆ ಸ್ಥಿರ ನಿರ್ವಹಣೆ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-13ರ ಪಂದ್ಯದಲ್ಲಿ ಶನಿವಾರ ಎದುರಾಗಲಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಮತ್ತೊಮ್ಮೆ ಸಿಕ್ಸರ್ ಸುರಿಮಳೆಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಉಭಯ ತಂಡಗಳಿಗೂ ಯುವ ಆಟಗಾರರೇ ಹೆಚ್ಚಿನ ಬಲ ತುಂಬಿರುವುದರಿಂದ ಈ ಕಾದಾಟ ಕುತೂಹಲಕಾರಿ ಎನಿಸಿದೆ. ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಭಾರತೀಯರು ಮಿಂಚುತ್ತಿದ್ದರೂ ವೇಗದ ಬೌಲಿಂಗ್‌ನಲ್ಲಿ ಕಗಿಸೊ ರಬಾಡ, ಆನ್ರಿಚ್ ನೋರ್ಜೆ ಮೇಲೆ ಹೆಚ್ಚು ಅವಲಂಬನೆ ಇದೆ. ಕೆಕೆಆರ್ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಲ್ಯದ ಚಿಂತೆ ಕಾಡುತ್ತಿದೆ.

ಉಭಯ ತಂಡಗಳು ಟೂರ್ನಿಯಲ್ಲಿ ಇದುವರೆಗೆ ಆಡಿರುವ ತಲಾ 3 ಪಂದ್ಯಗಳಲ್ಲಿ 2 ಗೆಲುವು, ಒಂದು ಸೋಲು ಕಂಡಿವೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್‌ರೈಸರ್ಸ್‌ ಎದುರು ಆಘಾತ ಎದುರಿಸಿತ್ತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ಈ ವಿಭಾಗದಲ್ಲೇ ನಿರಾಸೆ ಅನುಭವಿಸಿತ್ತು. ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ ಹಾಗೂ ಶಿಮ್ರೋನ್ ಹೆಟ್ಮೆಯೆರ್ ಅಸ್ಥಿರ ನಿರ್ವಹಣೆಯೇ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಹಿಂದಿನ ಮೂರು ಪಂದ್ಯಗಳಿಗೂ ತಲಾ ಒಬ್ಬರಂತೆ ಮೋಯಿತ್ ಶರ್ಮ, ಇಶಾಂತ್ ಶರ್ಮ ಹಾಗೂ ಆವೇಶ್ ಖಾನ್‌ರನ್ನು ಕಣಕ್ಕಿಳಿಸಿದರೂ ಯಶಸ್ವಿಯಾಗಿಲ್ಲ.

ಮತ್ತೊಂದೆಡೆ ಯುವ ಆಟಗಾರರೇ ಕೆಕೆಆರ್ ತಂಡಕ್ಕೆ ಬಂಡವಾಳವಾಗಿದ್ದಾರೆ. ಆರಂಭಿಕ ಹಂತದಲ್ಲಿ ಸುನೀಲ್ ನಾರಾಯಣ್ ವೈಫಲ್ಯ ಅನುಭವಿಸುತ್ತಿದ್ದಾರೆ. ಜತೆಗೆ ಬೌಲಿಂಗ್‌ನಲ್ಲೂ ವಿಂಡೀಸ್ ಆಟಗಾರ ಇದುವರೆಗೂ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಜತೆಗೆ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಫಲ್ಯ ಕೂಡ ತಂಡವನ್ನು ಕಾಡುತ್ತಿದೆ. 19 ವಯೋಮಿತಿ ವಿಶ್ವಕಪ್ ಆಡಿದ ಅನುಭವ ಹೊಂದಿರುವ ಕಮಲೇಶ್ ನಾಗರಕೋಟಿ, ಶಿವಂ ಮಾವಿ ಜೋಡಿ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದರೆ, ಶುಭಮಾನ್ ಗಿಲ್ ಆರಂಭಿಕರಾಗಿ ಇದುವರೆಗೂ ತಂಡಕ್ಕೆ ಆಧಾರವಾಗಿದ್ದಾರೆ.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್: ಕಳೆದ ಪಂದ್ಯದಲ್ಲಿ ಸೋಲು ಕಂಡರೂ ತಂಡದಲ್ಲಿ ಹೆಚ್ಚಿನ ಬದಲಾವಣೆಯ ನಿರೀಕ್ಷೆ ಇಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರೋನ್ ಹೆಟ್ಮೆಯರ್ ವೈಫಲ್ಯ ಕಾಣುತ್ತಿದ್ದರೂ, ಮತ್ತೆ ಅವಕಾಶ ಪಡೆಯಬಹುದು. ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಗಾಯದಿಂದ ಚೇತರಿಸಿಕೊಂಡು ಮರಳಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಅಶ್ವಿನ್ ಮರಳಿದಾಗಲೂ ಅಮಿತ್ ಮಿಶ್ರಾ ಸ್ಥಾನ ಉಳಿಸಿಕೊಂಡರೆ, ಭಾರತೀಯ ವೇಗಿಗಳಾದ ಮೋಹಿತ್ ಶರ್ಮ, ಇಶಾಂತ್ ಶರ್ಮ ಹಾಗೂ ಆವೇಶ್ ಖಾನ್ ಈ ಮೂವರಲ್ಲಿ ಒಬ್ಬರಷ್ಟೇ ಕಣಕ್ಕಿಳಿಯಬಹುದು.

ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೀ), ಶಿಮ್ರೋನ್ ಹೆಟ್ಮೆಯೆರ್, ಮಾರ್ಕಸ್ ಸ್ಟೋಯಿನಿಸ್, ಅಕ್ಷರ್ ಪಟೇಲ್, ಕಗಿಸೊ ರಬಾಡ, ಆನ್ರಿಚ್ ನೋರ್ಜೆ, ಅಮಿತ್ ಮಿಶ್ರಾ, ಮೋಹಿತ್ ಶರ್ಮ/ಇಶಾಂತ್ ಶರ್ಮ/ಆವೇಶ್ ಖಾನ್.

ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 15 ರನ್‌ಗಳಿಂದ ಸೋಲು.

ಕೋಲ್ಕತ ನೈಟ್‌ರೈಡರ್ಸ್‌: ತಂಡದಲ್ಲಿ ಯುವಕರೇ ಮಿಂಚುತ್ತಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಸುನೀಲ್ ನಾರಾಯಣ್ ಸಿಡಿಯಲು ವಿಫಲರಾಗಿದ್ದಾರೆ. 3 ಪಂದ್ಯಗಳಿಂದ 24 ರನ್‌ಗಳಷ್ಟೇ ಪೇರಿಸಿದ್ದಾರೆ. ಸುನೀಲ್ ನಾರಾಯಣ್ ಬದಲಿಗೆ ಉತ್ತಮ ಾರ್ಮ್‌ನಲ್ಲಿರುವ ಇಂಗ್ಲೆಂಡ್ ಆರಂಭಿಕ ಟಾಮ್ ಬಾಂಟನ್‌ಗೆ ಅವಕಾಶ ನೀಡಬಹುದು.

ಸಂಭಾವ್ಯ ತಂಡ: ಶುಭಮಾನ್ ಗಿಲ್, ಸುನೀಲ್ ನಾರಾಯಣ್/ಟಾಮ್ ಬಾಂಟನ್, ನಿತೀಶ್ ರಾಣಾ, ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ನಾಯಕ, ವಿಕೀ), ಇವೊಯಿನ್ ಮಾರ್ಗನ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.

ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 37 ರನ್ ಜಯ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 23, ಕೆಕೆಆರ್: 13, ಡೆಲ್ಲಿ 10