ಕ್ರೀಡೆ

ಗೆಲುವಿನ ಹಳಿ ಏರಲು ಸನ್‌ರೈಸರ್ಸ್‌-ಕೆಕೆಆರ್ ಫೈಟ್

ಅಬುಧಾಬಿ: ಕಳೆದ 2 ಪಂದ್ಯಗಳಲ್ಲಿ ಸೋಲು ಕಂಡು ನಲುಗಿರುವ ತಂಡಗಳಾದ ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-13ರಲ್ಲಿ ಭಾನುವಾರದ ಮೊದಲ ಪಂದ್ಯದಲ್ಲಿ ಸೆಣಸಲಿವೆ.

ಕಳೆದ ಪಂದ್ಯದಲ್ಲಿ ನಾಯಕತ್ವ ಬದಲಾದರೂ, ಗೆಲುವಿನ ಹಳಿ ಏರಲು ವಿಫಲವಾಗಿರುವ ಕೆಕೆಆರ್ ತಂಡ ಬ್ಯಾಟಿಂಗ್ ವಿಭಾಗದ ವೈಫಲ್ಯವನ್ನು ಸರಿಪಡಿಸುವತ್ತ ಗಮನ ಹರಿಸಿದೆ. ಮತ್ತೊಂದೆಡೆ ಸನ್‌ರೈಸರ್ಸ್‌ ತಂಡವೂ ಅಸ್ಥಿರ ನಿರ್ವಹಣೆಯಿಂದ ಬಳಲಿದ್ದು, ಗೆಲುವಿನ ಹಳಿ ಏರುವ ಹಂಬಲದಲ್ಲಿದೆ. ಕಳೆದ ತಿಂಗಳು ನಡೆದ ಉಭಯ ತಂಡಗಳ ನಡುವಿನ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಕೆಕೆಆರ್ ತಂಡ 7 ವಿಕೆಟ್‌ಗಳಿಂದ ಜಯಿಸಿತ್ತು.

ದಿನೇಶ್ ಕಾರ್ತಿಕ್ ನಾಯಕತ್ವವನ್ನು ಇವೊಯಿನ್ ಮಾರ್ಗನ್‌ಗೆ ಹಸ್ತಾಂತರಿಸಿದರೂ, ತಂಡದ ನಿರ್ವಹಣೆ ಮಾತ್ರ ಸುಧಾರಿಸಿಲ್ಲ. ಈ ಪಂದ್ಯದಲ್ಲಾದರೂ ತಂಡದ ಸಮಸ್ಯೆಗಳನ್ನು ಸರಿಪಡಿಸುವ ಗುರಿಯನ್ನು ಮಾರ್ಗನ್ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ಎದುರು ಅಗ್ರ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತತ್ತರಿಸಿದ ಕೆಕೆಆರ್, ಮಾರ್ಗನ್-ಕಮ್ಮಿನ್ಸ್ ಹೋರಾಟ ತೋರದೆ ಇದ್ದರೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಇದಲ್ಲದೆ ಬೌಲಿಂಗ್ ವಿಭಾಗದಲ್ಲೂ ಮಾರಕ ದಾಳಿ ಸಂಘಟಿಸಲು ಕೆಕೆಆರ್ ವಿಫಲವಾಗುತ್ತ ಬಂದಿದೆ.

ಕೆಕೆಆರ್‌ನಂಥದ್ದೇ ಸ್ಥಿತಿಯಲ್ಲಿ ಸನ್‌ರೈಸರ್ಸ್‌ ತಂಡವೂ ಇದ್ದು, ಗಾಯದ ಸಮಸ್ಯೆ ಕೂಡ ತಂಡಕ್ಕೆ ಹಿನ್ನಡೆಯಾಗಿದೆ. ಅಗ್ರ ಸರದಿ ಬಲಿಷ್ಠವಾಗಿದ್ದರೂ, ಮಧ್ಯಮ ಕ್ರಮಾಂಕದ ದೌರ್ಬಲ್ಯ ತಂಡವನ್ನು ಕಾಡುತ್ತಿದೆ. ಬೌಲಿಂಗ್‌ನಲ್ಲೂ ಸ್ಪಿನ್ನರ್ ರಶೀದ್ ಖಾನ್, ಟಿ. ನಟರಾಜನ್ ಹೊರತುಪಡಿಸಿ ಇತರರಿಂದ ಸ್ಥಿರ ನಿರ್ವಹಣೆ ಕಂಡುಬಂದಿಲ್ಲ.

ಸನ್‌ರೈಸರ್ಸ್‌ ಹೈದರಾಬಾದ್: ಸದ್ಯ ಟೂರ್ನಿಯಲ್ಲಿ ಸ್ಪಿನ್ನರ್‌ಗಳು ರನ್ ನಿಯಂತ್ರಿಸುವಲ್ಲಿ ಸಲರಾಗುತ್ತಿದ್ದಾರೆ. ಹೀಗಾಗಿ ಮೂವರು ವೇಗಿಗಳಾ ಕಾಂಬಿನೇಷನ್ ಬದಲಿಗೆ ಸ್ಪಿನ್ನರ್‌ಗಳಿಗೆ ಆದ್ಯತೆ ಸಿಗಬಹುದು. ಇದರಿಂದ ಅಭಿಷೇಕ್ ಶರ್ಮ ಅಥವಾ ಅಬ್ದುಲ್ ಸಮದ್ ತಂಡಕ್ಕೆ ಮರಳಬಹುದು.

ಕಳೆದ ಪಂದ್ಯ: ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ 20 ರನ್ ಸೋಲು.

ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಜಾನಿ ಬೇರ್‌ಸ್ಟೋ (ವಿ.ಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಂ ಗಾರ್ಗ್, ವಿಜಯ್ ಶಂಕರ್, ಶಾಬಾಜ್ ನದೀಂ, ರಶೀದ್ ಖಾನ್, ಸಂದೀಪ್ ಶರ್ಮ, ಖಲೀಲ್ ಅಹ್ಮದ್/ಅಭಿಷೇಕ್ ಶರ್ಮ/ಅಬ್ದುಲ್ ಸಮದ್, ಟಿ. ನಟರಾಜನ್.

ಕೋಲ್ಕತ ನೈಟ್‌ರೈಡರ್ಸ್‌: ಬ್ಯಾಟಿಂಗ್ ವಿಭಾಗದ ದೌರ್ಬಲ್ಯ ಸರಿಪಡಿಸಲು ಕೆಲ ಬದಲಾವಣೆ ಅಗತ್ಯವೆನಿಸಿದೆ. ಹೀಗಾಗಿ ರನ್‌ಬರ ಎದುರಿಸುತ್ತಿರುವ ನಿತೀಶ್ ರಾಣಾ ಬದಲಿಗೆ ರಿಂಕು ಸಿಂಗ್ ಆಡಬಹುದು. ಮುಂಬೈ ವಿರುದ್ಧ ಪರಿಣಾಮಕಾರಿ ಎನಿಸದ ಸ್ಪಿನ್ನರ್ ಕ್ರಿಸ್ ಗ್ರೀನ್ ಸ್ಥಾನ ಉಳಿಸಿಕೊಳ್ಳುವುದು ಕೂಡ ಅನುಮಾನ.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಸೋಲು.

ಸಂಭಾವ್ಯ ತಂಡ: ರಾಹುಲ್ ತ್ರಿಪಾಠಿ, ಶುಭಮಾನ್ ಗಿಲ್, ನಿತೀಶ್ ರಾಣಾ/ರಿಂಕು ಸಿಂಗ್, ಇವೊಯಿನ್ ಮಾರ್ಗನ್, ದಿನೇಶ್ ಕಾರ್ತಿಕ್ (ವಿ.ಕೀ), ಆಂಡ್ರೆ ರಸೆಲ್, ಕ್ರಿಸ್ ಗ್ರೀನ್/ಸುನೀಲ್ ನಾರಾಯಣ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಪ್ರಸಿದ್ಧಕೃಷ್ಣ, ವರುಣ್ ಚಕ್ರವರ್ತಿ.

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ಮುಖಾಮುಖಿ: 18

ಸನ್‌ರೈಸರ್ಸ್‌: 7

ಕೆಕೆಆರ್: 11