ಕ್ರೀಡೆ

3ನೇ ಬಾರಿ ಅಪ್ಪನಾಗುತ್ತಿದ್ದಾರೆ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​

ಆಕ್ಲೆಂಡ್​: ನ್ಯೂಜಿಲೆಂಡ್​ ಸೀಮಿತ ಓವರ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ 3ನೇ ಬಾರಿಗೆ ತಂದೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಇದರಿಂದಾಗಿ ಅವರು ಮುಂಬರುವ ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಅವಳಿ ಶತಕ ಸಿಡಿಸಿ ಮಿಂಚಿರುವ 33 ವರ್ಷದ ಕೇನ್​, ಹ್ಯಾಮಿಲ್ಟನ್​ನಲ್ಲಿ ನಡೆಯಲಿರುವ 2ನೇ ಟೆಸ್ಟ್​ನಲ್ಲೂ ಆಡಲಿದ್ದಾರೆ. ಬಳಿಕ ಮಗುವಿನ ನಿರೀಕ್ಷೆಯಲ್ಲಿ ಪತ್ನಿಯನ್ನು ಕೂಡಿಕೊಳ್ಳಲಿದ್ದಾರೆ.

ಸಾರಾ ರಹೀಮ್​ ಜತೆಗೆ 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕೇನ್​, 2020ರ ಡಿಸೆಂಬರ್​ನಲ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದರು. ಬಳಿಕ 2022ರ ಮೇನಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು. ಇದೀಗ 4 ವರ್ಷಗಳ ಅಂತರದಲ್ಲಿ 3ನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.