ಶಾರ್ಜಾ: ಐಪಿಎಲ್-13ರಲ್ಲಿ ಸತತ 5 ಸೋಲಿನಿಂದ ಕೊನೇ ಸ್ಥಾನಕ್ಕೆ ಕುಸಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೀಗ ಸತತ 5 ಗೆಲುವಿನೊಂದಿಗೆ 4ನೇ ಸ್ಥಾನಕ್ಕೇರಿ ಪ್ಲೇಆಫ್ ಅವಕಾಶ ವೃದ್ಧಿಸಿಕೊಂಡಿದೆ. 3 ದಿನಗಳ ಹಿಂದಷ್ಟೇ ತಂದೆ ತೀರಿಕೊಂಡಿದ್ದರೂ, ತವರಿಗೆ ಮರಳದೆ ಟೂರ್ನಿಯಲ್ಲಿ ಆಟ ಮುಂದುವರಿಸಿರುವ ಆರಂಭಿಕ ಮಂದೀಪ್ ಸಿಂಗ್ (66*ರನ್, 56 ಎಸೆತ, 8 ಬೌಂಡರಿ, 2 ಸಿಕ್ಸರ್) ವೈಯಕ್ತಿಕ ಶೋಕದ ನಡುವೆಯೂ ಪಂಜಾಬ್ ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ಮಂದೀಪ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ (51 ರನ್, 29 ಎಸೆತ, 2 ಬೌಂಡರಿ, 5 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೋಲ್ಕತ ನೈಟ್‌ರೈಡರ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಈ ಸೋಲಿನಿಂದ ಪ್ಲೇಆಫ್ ರೇಸ್‌ನಲ್ಲಿ ಕೆಕೆಆರ್ ಹಿನ್ನಡೆ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ತಂಡ, ಎದುರಾಳಿ ಬೌಲರ್‌ಗಳ ಶಿಸ್ತುಬದ್ಧ ದಾಳಿ ಎದುರು ಆರಂಭಿಕ ಶುಭಮಾನ್ ಗಿಲ್ (57 ರನ್, 45 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಆಸರೆಯಿಂದ 9 ವಿಕೆಟ್‌ಗೆ 149 ರನ್ ಪೇರಿಸಿತು. ಪ್ರತಿಯಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 150 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮಂದೀಪ್-ಗೇಲ್ ಆಸರೆ
ಗಾಯಳು ಮಯಾಂಕ್ ಅಗರ್ವಾಲ್ ಗೈರಿನಲ್ಲಿ ಆರಂಭಿಕರಾಗಿ ಬಡ್ತಿ ಪಡೆದಿರುವ ಮಂದೀಪ್ ಸಿಂಗ್ ಮೊದಲ ವಿಕೆಟ್‌ಗೆ ನಾಯಕ ಕೆಎಲ್ ರಾಹುಲ್ (28) ಜತೆಗೆ 47 ರನ್ ಪೇರಿಸಿ ಉತ್ತಮ ಆರಂಭ ಕೊಡಿಸಿದರು. ಬಳಿಕ ಗೇಲ್ ಜತೆಗೆ 2ನೇ ವಿಕೆಟ್‌ಗೆ 100 ರನ್ ಸೇರಿಸಿ ಗೆಲುವು ಖಚಿತಪಡಿಸಿದರು. ಜಯಕ್ಕೆ 3 ರನ್ ಅಗತ್ಯವಿದ್ದಾಗ ಗೇಲ್ ಔಟಾದರೂ, ಮಂದೀಪ್ ಇನ್ನೂ 7 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೆಕೆಆರ್‌ಗೆ ಶಮಿ ಆರಂಭಿಕ ಆಘಾತ
ಕಳೆದ ಪಂದ್ಯದಲ್ಲಿ ಆರಂಭಿಕರಾಗಿ ಬಡ್ತಿ ಪಡೆದು ಮಿಂಚಿದ್ದ ನಿತೀಶ್ ರಾಣಾ (0) ಈ ಬಾರಿ ಮೊದಲ ಓವರ್‌ನಲ್ಲೇ ಔಟಾದರು. ಮ್ಯಾಕ್ಸ್‌ವೆಲ್ ಎಸೆತದಲ್ಲಿ ಶಾರ್ಟ್ ೈನ್‌ಲೆಗ್‌ನಲ್ಲಿದ್ದ ಕ್ರಿಸ್ ಗೇಲ್‌ಗೆ ಕ್ಯಾಚ್ ನೀಡಿದರು. ಮರು ಓವರ್‌ನಲ್ಲಿ ಮೊಹಮದ್ ಶಮಿ (35ಕ್ಕೆ 3) ಕೆಕೆಆರ್‌ಗೆ ಡಬಲ್ ಶಾಕ್ ನೀಡಿದರು. ಶಮಿ 3 ಎಸೆತಗಳ ಅಂತರದಲ್ಲಿ ರಾಹುಲ್ ತ್ರಿಪಾಠಿ (7) ಮತ್ತು ದಿನೇಶ್ ಕಾರ್ತಿಕ್‌ಗೆ (0) ಡಗೌಟ್ ದಾರಿ ತೋರಿದರು.
ಚೇತರಿಕೆ ನೀಡಿದ ಗಿಲ್-ಮಾರ್ಗನ್
ಮೊದಲೆರಡು ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ಕೆಕೆಆರ್ ತಂಡಕ್ಕೆ ಶುಭಮಾನ್ ಗಿಲ್ ಮತ್ತು ನಾಯಕ ಇವೊಯಿನ್ ಮಾರ್ಗನ್ (40) 4ನೇ ವಿಕೆಟ್‌ಗೆ ಆಸರೆಯಾದರು. ಈ ಜೋಡಿ ಬಿರುಸಿನ 81 ರನ್ ಜತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿತು. ಸುಮಾರು 8 ಓವರ್‌ಗಳ ಕಾಲ ಕ್ರೀಸ್‌ನಲ್ಲಿದ್ದ ಈ ಜೋಡಿ ರನ್‌ಗತಿ ಕುಗ್ಗಲು ಬಿಡಲಿಲ್ಲ. ಆದರೆ ಸ್ಪಿನ್ನರ್ ರವಿ ಬಿಷ್ಣೋಯಿ (20ಕ್ಕೆ 2) ಈ ಜೋಡಿಯನ್ನು ಬೇರ್ಪಡಿಸುವುದರೊಂದಿಗೆ ಕೆಕೆಆರ್ ಮತ್ತೆ ಕುಸಿತ ಕಂಡಿತು.
ಗಿಲ್-ಮಾರ್ಗನ್ ಜತೆಯಾಟದ ಬಳಿಕ ಕೆಕೆಆರ್ ತಂಡ ಮತ್ತೊಮ್ಮೆ ಲಯ ತಪ್ಪಿತು. ಇವರಿಬ್ಬರು ಕ್ರೀಸ್‌ನಲ್ಲಿದ್ದಾಗ ಕೆಕೆಆರ್ 180ರ ಸನಿಹದ ಮೊತ್ತ ಪೇರಿಸುವ ಲಕ್ಷಣ ಕಾಣಿಸಿತು. ಆದರೆ ಸ್ಲಾಗ್ ಓವರ್‌ಗಳಲ್ಲೂ ಕೆಕೆಆರ್ ರನ್‌ಬರ ಎದುರಿಸಿದ ಕಾರಣ ದೊಡ್ಡ ಮೊತ್ತ ಪೇರಿಸುವ ಆಸೆ ಈಡೇರಲಿಲ್ಲ. ಸುನೀಲ್ ನಾರಾಯಣ್ (6), ಕಮಲೇಶ್ ನಾಗರಕೋಟಿ (6), ಪ್ಯಾಟ್ ಕಮ್ಮಿನ್ಸ್ (1) ಅವರಿಂದ ಉಪಯುಕ್ತ ಆಟ ಬರಲಿಲ್ಲ. ಗಿಲ್ ಕೂಡ ಅರ್ಧಶತಕ ಪೂರೈಸಿದ ಬಳಿಕ ಶಮಿ ಎಸೆತದಲ್ಲಿ ಔಟಾದರು. ಕೊನೆಯಲ್ಲಿ ಲಾಕಿ ರ್ಗ್ಯುಸನ್ (24*, 13 ಎಸೆತ, 3 ಬೌಂಡರಿ, 1 ಸಿಕ್ಸರ್) ಬಿರುಸಿನ ಆಟದಿಂದ ಕೆಕೆಆರ್ 150ರ ಸನಿಹ ಬಂದು ನಿಲ್ಲುವಲ್ಲಿ ಸಲವಾಯಿತು. ಕಳೆದ ಪಂದ್ಯದ ಹೀರೋ ಕ್ರಿಸ್ ಜೋರ್ಡನ್ (25ಕ್ಕೆ 2) ಮತ್ತೊಮ್ಮೆ ಬಿಗಿ ದಾಳಿ ಸಂಘಟಿಸಿದರು.